ಮಡಿಕೇರಿ, ಏ. 22: ಮಡಿಕೇರಿ ನಗರದಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ವಾಹನ ಗಳನ್ನು ನಿಲ್ಲಿಸಲು ಸ್ಥಳಾವಕಾಶದ ಕೊರತೆ ಒಂದೆಡೆಯಾದರೆ ಮತ್ತೊಂದೆಡೆ ಅತಿಯಾದ ವಾಹನಗಳ ಸಂಚಾರದಿಂದ ಸಂಚಾರಿ ವ್ಯವಸ್ಥೆ ಹದಗೆಡುತ್ತಿದೆ. ಅದರಲ್ಲೂ ನಗರದ ಹೃದಯ ಭಾಗವಾಗಿರುವ ಖಾಸಗಿ ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಟ್ರಾಫಿಕ್ ಸಮಸ್ಯೆ ಹೇಳ ತೀರದು.
ಖಾಸಗಿ ಬಸ್‍ಗಳ ನಿಲುಗಡೆ ಯಿಂದಾಗಿ ಆ ವ್ಯಾಪ್ತಿಯಲ್ಲಿ ಸ್ಥಳಾವಕಾಶ ಕೊರತೆಯಿಂದ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರಿ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿದೆ. ನೂತನ ಖಾಸಗಿ ಬಸ್ ನಿಲ್ದಾಣ ಉದ್ಘಾಟನೆ ಗೊಂಡಿದ್ದರೂ ಉಪಯೋಗಕ್ಕೆ ಬಾರದ ಹಿನ್ನೆಲೆಯಲ್ಲಿ ಖಾಸಗಿ ಬಸ್‍ಗಳು ಪ್ರಸ್ತುತ ಇರುವ ನಿಲ್ದಾಣವನ್ನೇ ಅವಲಂಭಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ನೂತನ ಖಾಸಗಿ ಬಸ್ ನಿಲ್ದಾಣ...
ಕಾಮಗಾರಿ ಆರಂಭಕ್ಕೂ ಮುನ್ನ ಜನಪ್ರತಿನಿಧಿಗಳ ಹಗ್ಗಜಗ್ಗಾಟಕ್ಕೆ ವೇದಿಕೆ ಎಂಬಂತಿದ್ದ ಈ ಯೋಜನೆ ಪ್ರಸ್ತುತ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ, ಸದ್ಯಕ್ಕೆ ಸಾರ್ವಜನಿಕರ ಉಪಯೋಗಕ್ಕೆ ಲಭಿಸುವ ಲಕ್ಷಣಗಳು ಕಾಣುತ್ತಿಲ್ಲ.
ಹೌದು... ಸುಮಾರು 4.99 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಬಹುತೇಕ ಮುಗಿದಿದ್ದು, ಅಂತಿಮ ಹಂತದ ಕೆಲಸ ಕಾರ್ಯಗಳು ಮಾತ್ರ ಬಾಕಿ ಉಳಿದುಕೊಂಡಿದೆ. ಮಾರ್ಚ್ 23 ರಂದು ಅಧಿಕೃತವಾಗಿ ಉದ್ಘಾಟನೆ ಗೊಂಡಿದ್ದರೂ ನಂತರ ಆ ಕಟ್ಟಡದತ್ತ ಯಾರೊಬ್ಬರೂ ಕಣ್ಣು ಹಾಯಿಸಿ ದಂತಿಲ್ಲ. ಅಡಿಪಾಯ, ವಿದ್ಯುತ್ ಸಂಪರ್ಕ ಹಾಗೂ ಅಲ್ಪ ಕಾಂಕ್ರಿಟ್ ಕೆಲಸಗಳು ನಡೆಯಬೇಕಿದೆ ಯಾದರೂ ಇದುವರೆಗೂ ಈ ಕೆಲಸಗಳು ಪೂರ್ಣಗೊಂಡಿಲ್ಲ. ಕೆಲ ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದಾರೆಯಾದರೂ ಅಲ್ಲಿ ಮೇಲ್ವಿಚಾರಣಕಾರರೂ ಇಲ್ಲ. ಕಾಮಗಾರಿಯ ಗುಣಮಟ್ಟ ಗಮನಿಸುವವರೂ ಇಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು, ಮಾರ್ಚ್ 23 ರಂದು ಉದ್ಘಾಟನಾ ಕಾರ್ಯಕ್ರಮದ ಬಳಿಕ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ತಾನು ನೂತನ ಖಾಸಗಿ ಬಸ್ ನಿಲ್ದಾಣ ಸ್ಥಳಕ್ಕೆ ಭೇಟಿ ನೀಡಲಾಗಲಿಲ್ಲ ಎಂದು ಹೇಳಿದರು.
ನಗರಸಭಾ ಆಯುಕ್ತೆ ಶುಭಾ ಪ್ರತಿಕ್ರಿಯಿಸಿ ನೂತನ ಬಸ್ ನಿಲ್ದಾಣ ದಲ್ಲಿ ಬಸ್‍ಗಳು ನಿಲ್ಲಲು ಸನ್ನದ್ಧ ವಾಗಿದೆ. ತಾ. 30 ರಿಂದಲೇ ಪೂರ್ಣ ಪ್ರಮಾಣದಲ್ಲಿ ಖಾಸಗಿ ಬಸ್‍ಗಳ ಸಂಚಾರವನ್ನು ನೂತನ ಖಾಸಗಿ ಬಸ್ ನಿಲ್ದಾಣದಿಂದ ಆರಂಭಿಸ ಬಹು ದಾದರೂ ಚುನಾವಣೆ ಹಿನ್ನೆಲೆಯಲ್ಲಿ ಯಾವದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ನೂತನ ಬಸ್ ನಿಲ್ದಾಣ ಕಾರ್ಯಾರಂಭಗೊಂಡರೆ ರಾಜಾ ಸೀಟು-ವೆಬ್ಸ್ ಮಾರ್ಗವಾಗಿಯೇ ಬಸ್‍ಗಳು ಸಂಚರಿಸಲಿವೆ. ಆದರೆ ಈ ರಸ್ತೆಗಳನ್ನು ಅಗಲೀಕರಣ ಮಾಡುವ ಯಾವದೇ ಯೋಜನೆಗಳು ಸದ್ಯಕ್ಕಿಲ್ಲ ಎಂದು ಹೇಳಿದರು. ಆದರೆ, ರಸ್ತೆಗಳನ್ನು ಡಾಮರೀಕರಣ ಮಾಡಲಾಗುತ್ತದೆ. ಸಂಚಾರಕ್ಕೆ ಸುಗಮಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಮುಗಿಯದ ಕಥೆ...!
ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಅದ್ಯಾಕೋ ಒಂದಲ್ಲ ಒಂದು ಎಡರು-ತೊಡರುಗಳು ತಪ್ಪುತ್ತಿಲ್ಲ. ಒಂದು ಕಾಲದಲ್ಲಿ ‘ಜಾಗದ ಕೊರತೆಯಿತ್ತು; ಜಾಗದೊರೆತ ಬಳಿಕ ಆ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಪರ-ವಿರೋಧಗಳು ವ್ಯಕ್ತಗೊಂಡಿದ್ದವು. ಬಳಿಕ ಕಾಮಗಾರಿ ಪ್ರಾರಂಭಗೊಂಡು ಅಧಿಕೃತವಾಗಿ ಉದ್ಘಾಟನೆಗೊಂಡಿ ದ್ದರೂ, ಇದೀಗ ಜನೋಪಯೋಗಕ್ಕೆ ಲಭ್ಯವಿಲ್ಲ ದಿರುವದು ವಿಪರ್ಯಾಸವೇ ಸರಿ.