ಮಡಿಕೇರಿ, ಏ. 22: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಆದರೆ 2018ರ ಚುನಾವಣಾ ಕಣ ಕೊಡಗಿನಲ್ಲಿ ಇನ್ನೂ ಸ್ಪಷ್ಟಗೊಳ್ಳದೆ ನಿಗೂಢವಾಗಿಯೇ ಉಳಿದಿದ್ದು, ಈಗಲೇ ಸೋಲು - ಗೆಲುವನ್ನು ವಿಶ್ಲೇಷಿಸುವಂತಿಲ್ಲ. ಕೇವಲ ಎರಡು ವಿಧಾನಸಭಾ ಕ್ಷೇತ್ರಗಳನ್ನು ಕೊಡಗು ಜಿಲ್ಲೆ ಹೊಂದಿದೆಯಾದರೂ ರಾಜಕೀಯವಾಗಿ ಹತ್ತು ಹಲವಾರು ವಿಚಾರಗಳಿದ್ದು, ಮತದಾರರು ಇನ್ನೂ ಗೊಂದಲದಲ್ಲೇ ಉಳಿದಿದ್ದಾರೆ. ವಿವಿಧ ಪಕ್ಷಗಳ ನಾಯಕರು, ಘೋಷಿತ ಅಭ್ಯರ್ಥಿಗಳೂ ಇದರಿಂದ ಹೊರತಾಗಿಲ್ಲ. ಮತದಾರರೂ ಗುಟ್ಟು ಬಿಡುತ್ತಿಲ್ಲ. ಚುನಾವಣೆಗೆ ಸ್ಪರ್ಧಿಸಲು ಏಪ್ರಿಲ್ 17 ರಿಂದ ನಾಮಪತ್ರ ಸ್ವೀಕಾರ ಪ್ರಕ್ರಿಯೆ ಆರಂಭಗೊಂಡಿದ್ದು, ನಾಮಪತ್ರ ಸಲ್ಲಿಕೆಗೆ ಇನ್ನು ಕೇವಲ ಎರಡು ದಿನಗಳ ಕಾಲಾವಕಾಶ ಮಾತ್ರ ಉಳಿದಿದೆ.ಅದೂ ನಾಮಪತ್ರ ಸಲ್ಲಿಕೆಯ ಅವಧಿ ಬೆಳಿಗ್ಗೆ 10 ರಿಂದ ಅಪರಾಹ್ನ 3 ಗಂಟೆಯ ತನಕ ಮಾತ್ರವಿದ್ದು, 48 ಗಂಟೆಗಳ ಕಾಲಾವಕಾಶವೂ ಬಾಕಿ ಉಳಿದಿಲ್ಲ. ತಾ. 22 ಭಾನುವಾರ ನಾಮಪತ್ರ ಸಲ್ಲಿಕೆಗೆ ರಜಾ ದಿನವಾಗಿದ್ದು, ಕಾಂಗ್ರೆಸ್ ಹೊರತುಪಡಿಸಿ ಇತರ ಹೆಚ್ಚು ರಾಜಕೀಯ ಚಟುವಟಿಕೆಗಳು ನಡೆದಿಲ್ಲ.ವೀರಾಜಪೇಟೆ : ವೀರಾಜಪೇಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ಯಾರು ಎಂಬದು ಸ್ಪಷ್ಟವಾಗಿದೆ. ಈ ಬಾರಿ ಬಿಜೆಪಿ, ಕಾಂಗ್ರೆಸ್‍ಗಿಂತ ಮುಂಚಿತವಾಗಿ ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿ ಘೋಷಣೆ ಮಾಡಿದ್ದು, ಈ ಪಕ್ಷದ ಹುರಿಯಾಳು ಸಂಕೇತ್ ಪೂವಯ್ಯ ಮಾತ್ರ ಪ್ರಚಾರ ಹಾಗೂ ಓಡಾಟದಲ್ಲಿ ಒಂದಷ್ಟು ಮುಂಚೂಣಿಯಲ್ಲಿದ್ದರು. ವೀರಾಜಪೇಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏಪ್ರಿಲ್ 15 ರಂದು ಕಾಂಗ್ರೆಸ್ ಪಕ್ಷ ಸಿ.ಎಸ್. ಅರುಣ್‍ಮಾಚಯ್ಯ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಆದರೆ ಈ ಕ್ಷೇತ್ರದಲ್ಲಿ ಹಲವಾರು ಆಕಾಂಕ್ಷಿಗಳು ಪಕ್ಷದ ಟಿಕೆಟ್‍ನ ರೇಸ್‍ನಲ್ಲಿದ್ದು, ಅಂತಿಮವಾಗಿ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿಯಾಗಿರುವ ಕದ್ದಣಿಯಂಡ ಹರೀಶ್ ಬೋಪಣ್ಣ ಹಾಗೂ ಪದ್ಮಿನಿಪೊನ್ನಪ್ಪ ಅರುಣ್‍ಗೆ ನೇರ ಸ್ಪರ್ಧಾಳುವಾಗಿದ್ದರು. ಅರುಣ್‍ಗೆ ಟಿಕೆಟ್ ಘೋಷಣೆಯಾದ ನಂತರವು ಇದು ಕೆಲವೊಂದು ವಿವಾದಕ್ಕೆ ಎಡೆಯಾಗಿತ್ತು.

ಆದರೆ ಇದೀಗ ಈ ವಿಚಾರ ಮೆಲ್ಲ ಮೆಲ್ಲಗೆ ತಿಳಿಯಾಗುತ್ತಿದ್ದು, ಬಿ ಫಾರಂ ಪಡೆದಿರುವ ಅರುಣ್ ಪ್ರಚಾರ ಆರಂಭಿಸಿದ್ದಾರೆ. ಅಲ್ಲದೆ ಅರುಣ್ ಮಾಚಯ್ಯ ಅವರು ಸೋಮವಾರ (ಇಂದು) ನಾಮಪತ್ರ ಸಲ್ಲಿಸಲಿದ್ದಾರೆ. ಹರೀಶ್ ಬೋಪಣ್ಣ ಅವರು ಬಂಡಾಯವಾಗಿ ಸ್ಪರ್ಧಿಸಲಿದ್ದಾರೆ ಎಂಬ ಮಾತು ಒಂದೆಡೆಯಿತ್ತಾದರೂ ಈ ಸಾಧ್ಯತೆ ಇದೀಗ ಕಡಿಮೆಯಾಗಿದೆ. ಆದರೆ, ಪದ್ಮಿನಿ ಪೊನ್ನಪ್ಪ ಅವರು ಬಂಡಾಯ ಸ್ಪರ್ಧೆಯನ್ನು ಖಚಿತ ಪಡಿಸಿದ್ದಾರೆ.

ಈ ನಡುವೆ ಈ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರವೂ ತೀವ್ರ ಕುತೂಹಲ ಸೃಷ್ಟಿಸಿತ್ತು. ಹಾಲಿ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಟಿಕೆಟ್ ನೀಡಬಾರದು ಎಂಬ ಬಹಿರಂಗ ಒತ್ತಾಯ, ಹಲವರ ಟಿಕೆಟ್ ಪ್ರಯತ್ನ ಬಿಜೆಪಿ ಪ್ರಕಟಿಸಿದ ಆರಂಭದ ಎರಡು ಪಟ್ಟಿಗಳಲ್ಲೂ ಕೆ.ಜಿ. ಬೋಪಯ್ಯ ಹೆಸರು ಇಲ್ಲದೆ ಇದ್ದುದು ಇನ್ನಷ್ಟು ಕೌತುಕಕ್ಕೆ ಕಾರಣವಾಗಿತ್ತು. ಆದರೆ ತಾ. 20 ರಂದು ಬಿಜೆಪಿ ಪ್ರಕಟಿಸಿರುವ ಮೂರನೇ ಪಟ್ಟಿಯಲ್ಲಿ ಕೆ.ಜಿ. ಬೋಪಯ್ಯ ಅವರನ್ನು ಅಭ್ಯರ್ಥಿ ಎಂದು ಪ್ರಕಟಿಸಿದ ಬಳಿಕ ಆ ತನಕದ ವಿರೋಧಗಳು ಮರೆಯಾಗಿದ್ದು, ಬಿಜೆಪಿ ಮೈ ಕೊಡವಿ ಏಳುತ್ತಿದೆ.

(ಮೊದಲ ಪುಟದಿಂದ)

ಪದ್ಮಿನಿ ‘ಗರಂ’

ಅರುಣ್ ಮಾಚಯ್ಯಗೆ ಟಿಕೆಟ್ ಘೋಷಣೆ ಬಳಿಕವೂ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿದ್ದ ಕಾಂಗ್ರೆಸ್‍ನ ಪದ್ಮಿನಿ ಪೊನ್ನಪ್ಪ ಮತ್ತಷ್ಟು ‘ಗರಂ’ ಆಗಿದ್ದಾರೆ. ಈ ಕುರಿತು ತೀವ್ರ ವಿರೋಧವನ್ನು ಬಹಿರಂಗವಾಗಿ ವ್ಯಕ್ತಪಡಿಸಿರುವ ಪದ್ಮಿನಿ ನಡೆ ತಾ. 22ರ ಭಾನುವಾರದಂದು ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಳ್ಳುತ್ತಿರುವದಾಗಿಯೂ ಸುದ್ದಿಯಾಗಿದೆ. ಇದು ಕಾಂಗ್ರೆಸ್ ಪಾಳಯದಲ್ಲಿ ಎಲ್ಲವೂ ಸರಿಯಾಗುತ್ತಿಲ್ಲ ಎಂಬದನ್ನು ಮತ್ತೆ ಸಾಬೀತು ಪಡಿಸಿದಂತಿದೆ. ಜೆಡಿಎಸ್‍ನ ಸಂಕೇತ್‍ಪೂವಯ್ಯ, ಕಾಂಗ್ರೆಸ್‍ನ ಅರುಣ್ ಮಾಚಯ್ಯ ಹಾಗೂ ಬಿಜೆಪಿಯ ಕೆ.ಜಿ. ಬೋಪಯ್ಯ ನಡುವೆ ತ್ರಿಕೋನ ಸ್ಪರ್ಧೆ ಎಂದು ವಿಶ್ಲೇಷಿಸಲಾಗುತ್ತಿದೆಯಾದರೂ ಇದೀಗ ಎಂಇಪಿ ಪಕ್ಷದಿಂದ ಸ್ಪರ್ಧಿಸುವದಾಗಿ ಹೇಳಿರುವ ಬಿಜೆಪಿಯನ್ನೇ ಈ ಹಿಂದೆ ವೀರಾಜಪೇಟೆಯಲ್ಲಿ ಪ್ರತಿನಿಧಿಸಿದ್ದ ಮಾಜಿ ಶಾಸಕ ಹೆಚ್.ಡಿ. ಬಸವರಾಜು, ಎಸ್‍ಡಿಪಿಐ ಪಕ್ಷದ ಅಭ್ಯರ್ಥಿ ಸೇರಿದಂತೆ ಒಂದೆರಡು ಪಕ್ಷೇತರರೂ ಇಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಯಾರ ಸ್ಪರ್ಧೆ ಯಾರಿಗೆ ಲಾಭ ಯಾರಿಗೆ ನಷ್ಟ ಎಂಬ ಸ್ಪಷ್ಟ ಚಿತ್ರಣ ಇನ್ನೂ ಅಂತಿಮವಾಗಿಲ್ಲವೆನ್ನಬಹುದು ತಾ. 24 ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಆ ದಿನ ಅಥವಾ ನಾಮಪತ್ರ ವಾಪಸ್ಸಾತಿ ಬಳಿಕವಷ್ಟೆ ವೀರಾಜಪೇಟೆಯ ರಾಜಕೀಯದ ಚಿತ್ರಣವನ್ನು ವಿಶ್ಲೇಷಿಸಬಹುದು.

ಮಡಿಕೇರಿ ಕ್ಷೇತ್ರ

ಇತ್ತ ಮಡಿಕೇರಿ ಕ್ಷೇತ್ರಕ್ಕೆ ಬಂದರೆ ಜೆಡಿಎಸ್ ಈ ಹಿಂದೆಯೇ ಬಿ.ಎ. ಜೀವಿಜಯ ಅವರನ್ನು ಅಭ್ಯರ್ಥಿಯಾಗಿ ಪ್ರಕಟಿಸಿದೆ. ಹಾಲಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೂ ಬಿಜೆಪಿ ಪ್ರಥಮ ಪಟ್ಟಿಯಲ್ಲೇ ಅವಕಾಶ ನೀಡಲಾಗಿದ್ದು, ಇವರಿಬ್ಬರ ಸ್ಪರ್ಧೆಗೆ ಪಕ್ಷದಲ್ಲಿ ವಿರೋಧ ಇಲ್ಲ.

ಇಲ್ಲೂ ಕಾಂಗ್ರೆಸ್ ಗೊಂದಲ

ಮಡಿಕೇರಿ ಕ್ಷೇತ್ರದಲ್ಲೂ ಕಾಂಗ್ರೆಸ್‍ನದ್ದೇ ಹೆಚ್ಚು ಗೊಂದಲವಿದೆ. ಅರುಣ್ ಮಾಚಯ್ಯಗೆ ಟಿಕೆಟ್ ಘೋಷಿಸಿದ ದಿನವೇ ವಕೀಲ ಚಂದ್ರಮೌಳಿ ಅವರಿಗೂ ಇಲ್ಲಿ ಟಿಕೆಟ್ ಘೋಷಿಸಲಾಗಿತ್ತು. ಆದರೆ ಮರುದಿನದಿಂದಲೇ ಇತರ ಆಕಾಂಕ್ಷಿಗಳಾಗಿದ್ದ ನಾಪಂಡ ಮುತ್ತಪ್ಪ, ಕೆ.ಎಂ. ಲೋಕೇಶ್, ಕೆ.ಪಿ. ಚಂದ್ರಕಲಾ, ಕುಮುದಾ ಧರ್ಮಪ್ಪ, ಬ್ರಿಜೇಶ್ ಕಾಳಪ್ಪ ಅವರುಗಳಿಂದ ವಿರೋಧ ಕೇಳಿ ಬಂದಿದ್ದು, ಎಲ್ಲರಿಗೂ ಅರಿವಿದೆ. ಮತ್ತೊಂದು ಬೆಳವಣಿಗೆಯಲ್ಲಿ ಚಂದ್ರಮೌಳಿ ಅವರ ಟಿಕೆಟ್‍ಗೆ ಸಂಬಂಧಿಸಿದಂತೆ ಎಐಸಿಸಿ ಮಟ್ಟಕ್ಕೆ ದೂರು ಹೋದ ಬಳಿಕ ಅವರ ಟಿಕೆಟ್ ತಡೆ ಹಿಡಿಯಲ್ಪಟ್ಟು ಮತ್ತೆ ವಿರೂಪಾಕ್ಷಯ್ಯ ಸೇರಿದಂತೆ ಕೆಲವರ ಹೆಸರು ಚಲಾವಣೆಗೆ ಬಂದಿದ್ದು, ತಾ. 22ರ ಭಾನುವಾರದ ತನಕವೂ ಇದು ಮುಂದುವರಿದಿದ್ದು, ಸಂಜೆ ವೇಳೆಗೆ ಕೆ.ಪಿ. ಚಂದ್ರಕಲಾ ಹೆಸರು ಬಂದಿದೆ.

ಈ ನಡುವೆ ಸಮಾಜವಾದಿ ಪಕ್ಷದಿಂದ ಚೀಯಂಡಿರ ಕಿಶನ್ ಉತ್ತಪ್ಪ, ಅಖಿಲ ಭಾರತ ಹಿಂದೂಸಭಾ, ಎಂಇಪಿ ಪಕ್ಷದಿಂದ ರಶೀದ ಹಾಗೂ ಎಸ್‍ಡಿಪಿಐ ಪಕ್ಷದಿಂದಲೂ ಸ್ಪರ್ಧೆಯಿದೆ ಎನ್ನಲಾಗಿದ್ದು, ಇಲ್ಲಿಯೂ ಸ್ಪಷ್ಟ ಚಿತ್ರಣ ಬಂದಿಲ್ಲ. ಕಾಂಗ್ರೆಸ್‍ನಿಂದ ಬಂಡಾಯ ಸ್ಪರ್ಧೆಯೂ ಇರುವದರಿಂದ ಈ ಕ್ಷೇತ್ರವೂ ಕುತೂಹಲ ಸೃಷ್ಟಿಸಿದೆ. ಈ ಎಲ್ಲಾ ಕುತೂಹಲಗಳಿಗೆ ನಾಮಪತ್ರ ಸಲ್ಲಿಕೆಯ ಅಂತಿಮ ದಿನ ಹಾಗೂ ನಾಮಪತ್ರ ವಾಪಸಾತಿ ದಿನದ ಬಳಿಕವಷ್ಟೇ ಉತ್ತರ ಸಿಗಲಿದೆ. ಇದಾದ ಬಳಿಕವಷ್ಟೆ ಮಡಿಕೇರಿ ಕ್ಷೇತ್ರದಲ್ಲೂ ಸೋಲು - ಗೆಲುವಿನ ಲೆಕ್ಕಾಚಾರದ ವಿಶ್ಲೇಷಣೆ ಆರಂಭವಾಗಲಿದೆ.

ಕೊಡಗು ಜಿಲ್ಲೆ ಕೇವಲ ಎರಡು ಕ್ಷೇತ್ರಗಳನ್ನು ಮಾತ್ರ ಹೊಂದಿದ್ದರೂ ಹಲವಾರು ರಾಜಕೀಯ ನಡೆಗಳು ಇರುವ ಕಾರಣದಿಂದಾಗಿ ಈ ಬಾರಿಯ ಅಭ್ಯರ್ಥಿ ಹಾಗೂ ಫಲಿತಾಂಶದ ಕುತೂಹಲ ಮುಂದುವರಿಯುತ್ತಿದೆ. ತಾ. 23 ಹಾಗೂ 24 ಹೆಚ್ಚಿನ ಕುತೂಹಲದ ದಿನವೆನ್ನಬಹುದು.

ಕುಮುದಾ ಧರ್ಮಪ್ಪ ಅನಿಸಿಕೆ

ಟಿಕೆಟ್ ಸ್ಪರ್ಧೆಯಲ್ಲಿ ಏಳೆಂಟು ಆಕಾಂಕ್ಷಿಗಳ ನಡುವೆ ನಾನು ಎರಡನೇ ಸ್ಥಾನದಲ್ಲಿದ್ದೆ. ನನ್ನ ಪ್ರಕಾರ ಇದೂ ಒಂದು ಸಾಧನೆಯೇ ಸರೀ. ಮಡಿಕೇರಿ ಕ್ಷೇತ್ರ ಬಹಳ ವರ್ಷಗಳ ನಂತರ ಲಿಂಗಾಯತ ಜನಾಂಗದವರಿಗೆ ನೀಡಬೇಕೆಂಬ ನಿರ್ಧಾರವೂ ಆಯಿತು ಖ್ಯಾತ ವಕೀಲರಾದ ಚಂದ್ರಮೌಳಿಯವರು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದ್ದರು. ಮಾಜಿ ಐಎಎಸ್ ಅಧಿಕಾರಿ ವಿರೂಪಾಕ್ಷಯ್ಯ ಅವರೂ ಪ್ರಯತ್ನ ನಡೆಸಿದ್ದರು. ಮುಖ್ಯಮಂತ್ರಿಗಳು ಭರವಸೆಯಿತ್ತರು. ನಾಪಂಡ ಮುತ್ತಪ್ಪ ಅವರು ತಮ್ಮದೇ ಪಡೆ ಕಟ್ಟಿಕೊಂಡು ನಿರಂತರ ಪ್ರಯತ್ನದಲ್ಲಿದ್ದರು. ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧೆಗಿಳಿಯಲು ತಯಾರಿದ್ದರು. ಚಂದ್ರಕಲಾ ಮೇಡಂ ಕೂಡಾ ಸ್ಪರ್ಧೆಯಲ್ಲಿದ್ದರು. ಈ ನಡುವೆ ಬ್ರಿಜೇಶ್ ಕಾಳಪ್ಪ ಅವರ ಎಂಟ್ರಿ ಇಡೀ ವಾತಾವರಣವನ್ನೇ ಬದಲಾಯಿಸಿ ಬಿಟ್ಟಿತು.

ರಾಜ್ಯಸಭಾ ಟಿಕೆಟ್ ವಂಚಿತರಾಗಿದ್ದ ಬ್ರಿಜೇಶ್ ಚಂದ್ರಮೌಳಿಯವರಿಗೆ ಸೆಡ್ಡು ಹೊಡೆದು ಕೆಲವು ವಿಚಾರಗಳನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದು ತೀವ್ರತರ ಚರ್ಚೆಗೆ ಆಸ್ಪದ ಕೊಟ್ಟಿತು. ಇಷ್ಟೆಲ್ಲಾ ಬೆಳವಣಿಗೆಗಳಿಂದ ನನಗೆ ಅತೀವ ಬೇಸರವಾಗಿತ್ತು. ಈ ನಡುವೆ ಕೆಪಿಸಿಸಿಯಿಂದ ಕರೆ ಬಂತು. ಚಂದ್ರಮೌಳಿಯವರ ಬದಲು ನನ್ನನ್ನು ಪರಿಗಣಿಸಲು ಪಕ್ಷ ಬಯಸಿರುವದಾಗಿ ತಿಳಿದು ಬಂತಾದರೂ ನಾನು ಪ್ರಯತ್ನ ಕೈ ಬಿಟ್ಟಿದ್ದೇನೆ. ಪಕ್ಷ ಯಾರನ್ನು ಪರಿಗಣಿಸಿದರೂ ನಾನು ಪಕ್ಷದ ಪರವಾಗಿ ಕೆಲಸ ಮಾಡುವದಾಗಿ ತಿಳಿಸಿದೆ.

ಚಂದ್ರಮೌಳಿಯವರನ್ನು ಮಡಿಕೇರಿಯಿಂದ ವಾಪಾಸು ಕರೆಸಿಕೊಂಡು ವಿವರಣೆ ಕೇಳಲಾಯಿತು ಈ ಸಂದರ್ಭದಲ್ಲಿ ಆಕಾಂಕ್ಷಿಗಳೆಲ್ಲರೂ ಮತ್ತೆ ಪ್ರಯತ್ನ ಮುಂದುವರೆಸಿದರು. ನನ್ನ ಬಳಿ ಗೆಲ್ಲುವ ಛಲವಿದೆಯೇ ಹೊರತು ಕೋಟಿಗಟ್ಟಲೆ ಹಣವಾಗಲೀ, ಗಾಡ್‍ಫಾದರ್‍ಗಳಾಗಲೀ ಇಲ್ಲವೆಂದು ಸ್ಪಷ್ಟಪಡಿಸಿದೆ. ಇದೆಲ್ಲ ಇದ್ದೂ ಚಂದ್ರಮೌಳಿಯವರು ಕಣದಿಂದ ಹಿಂದೆ ಸರಿಯಬೇಕಾಗಿದೆ. ರಾಜಕೀಯದಲ್ಲಿ ಹೀಗೆಲ್ಲಾ ಇದೆಯಾ ಎಂದು ನನಗೆ ಒಂದು ಕಡೆ ಆಶ್ಚರ್ಯವಾದರೆ ಮತ್ತೊಂದು ಕಡೆ ತೀವ್ರತರದ ಮರೆಯಲಾಗದ ಅನುಭವವೂ ಆಯಿತು. ಅದು ನನ್ನ ಮುಂದಿನ ರಾಜಕೀಯ ಬದುಕಿಗೆ ಮೆಟ್ಟಿಲುಗಳೆಂದೇ ಭಾವಿಸುತ್ತೇನೆ. ಸದ್ಯಕ್ಕೆ ನನ್ನ ಮುಂದಿರುವ ಸವಾಲು ಎಂದರೇ ಕಾಂಗ್ರೆಸ್ ಪಕ್ಷವನ್ನು ಗೆಲುವಿನೆಡೆಗೆ ತಲಪಿಸಲು ನನ್ನದೊಂದು ಅಳಿಲು ಸೇವೆಯ ಪ್ರಯತ್ನ.