ಮಡಿಕೇರಿ, ಏ. 22: ವಕೀಲ ಚಂದ್ರಮೌಳಿ ಅವರನ್ನು ಈ ಹಿಂದೆ ಕಾಂಗ್ರೆಸ್ ವರಿಷ್ಠ ಮಂಡಳಿ ಅಧಿಕೃತ ಅಭ್ಯರ್ಥಿಯಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆ ಮಾಡಿತ್ತು. ಆದರೆ, ‘ಬಿ’ ಫಾರಂ ನೀಡುವ ಮುನ್ನ ಕಂಡುಬಂದ ಆಕ್ಷೇಪವೊಂದರಿಂದ ಅವರಿಗೆ ಟಿಕೆಟ್ ಕೈ ತಪ್ಪಿ ಹೋಗಿದ್ದು. ಸ್ವತ: ತಾವೇ ಸ್ಪರ್ಧಾ ಕಣದಿಂದ ಹಿಂಜರಿದಿದ್ದಾರೆ. ಈ ನಡುವೆ ಪ್ರಬಲ ಆಕಾಂಕ್ಷಿಗಳಲ್ಲಿ ಓರ್ವರಾಗಿದ್ದ ಕೆ.ಪಿ.ಚಂದ್ರಕಲಾ ಅವರನ್ನು ಕಾಂಗ್ರೆಸ್ ವರಿಷ್ಠ ಮಂಡಳಿ ಅಧಿಕೃತ ಅಭ್ಯರ್ಥಿಯೆಂದು ಇಂದು ಘೋಷಿಸಿದೆ. ಅಲ್ಲದೆ, ಚಂದ್ರಕಲಾ ಪರವಾಗಿ ಅವರ ಸಹೋದರ ನಟ ಜೈ ಜಗದೀಶ್ ‘ಬಿ’ ಫಾರಂ ಪಡೆದುಕೊಂಡಿದ್ದಾರೆ.ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ ಚಂದ್ರಕಲಾ ಅವರು ಕೆಪಿಸಿಸಿ ಯಿಂದ ಈ ಸಂದೇಶ ಬಂದಾಗ ತಮ್ಮ ವಾಸಸ್ಥಳವಾದ ಕಾರೆಕೊಪ್ಪದಲ್ಲಿದ್ದರು. ಕಳೆÉದ ನಾಲ್ಕು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಕೆ.ಜೆ. ಜಾರ್ಜ್ ಹಾಗೂ ಡಿ.ಕೆ.ಶಿವಕುಮಾರ್ ಇವರುಗಳನ್ನು ಭೇಟಿಯಾಗಿದ್ದರು. ತಾನು ಪಕ್ಷಕ್ಕೆ ಹಲವು ವರ್ಷಗಳಿಂದ ದುಡಿದಿದ್ದು ಅಭ್ಯರ್ಥಿ ಆಕಾಂಕ್ಷಿಯಾಗಿ ದ್ದೇನೆ ಎಂದು ಗಮನ ಸೆಳೆದಿದ್ದರು. ಚಂದ್ರಮೌಳಿ ಅವರ ಟಿಕೆಟ್ ವಿಚಾರ ಗೊಂದಲದಲ್ಲಿದ್ದುದರಿಂದ ತನಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು.

(ಮೊದಲ ಪುಟದಿಂದ) ಯಾವದೇ ಕಾರಣಕ್ಕೆ ಯಾರಿಗೆ ಅವಕಾಶ ದೊರೆತರೂ ತಾನು ಬಂಡಾಯ ನಿಲ್ಲುವದಿಲ್ಲ. ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ಆದರೆ, ತನ್ನನ್ನು ಪರಿಗಣಿಸದಿದ್ದ ಕುರಿತು ತನಗೆ ಅಸಮಾಧಾನವಿದ್ದು ಅದನ್ನು ವರಿಷ್ಠರ ಗಮನಕ್ಕೆ ತರುತ್ತಿರು ವದಾಗಿ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದರು. ಅವರ ನೇರ ನುಡಿಯನ್ನು ಪರಿಗಣಿಸಿದ ಹೈಕಮಾಂಡ್ ಹಾಗೂ ಸಚಿವರುಗಳಾದ ಜಾರ್ಜ್ ಮತ್ತು ಡಿ.ಕೆ. ಶಿವಕುಮಾರ್ ಅವರುಗಳ ಬೆಂಬಲದಿಂದ ಮುಖ್ಯಮಂತ್ರಿಯವರು ಅಂತಿಮವಾಗಿ ಚಂದ್ರಕಲಾ ಅವರನ್ನು ಇಂದು ಆಯ್ಕೆ ಮಾಡಿರುವದಾಗಿ ತಿಳಿದುಬಂದಿದೆ.

ಪಕ್ಷವು ಭಾನುವಾರವೇ ‘ಬಿ’ ಫಾರಂ ನೀಡಲಿದ್ದು ತನ್ನ ಸಹೋದರ ಹಾಗೂ ಚಿತ್ರ ನಟ ಜೈ ಜಗದೀಶ್ ಅವರು ಬೆಂಗಳೂರಿನಲ್ಲಿದ್ದುದರಿಂದ ‘ಬಿ’ ಫಾರಂ ಅನ್ನು ಅವರೇ ಪಡೆದಿಟ್ಟುಕೊಳ್ಳಲಿದ್ದಾರೆ, ತಾನು ಸೋಮವಾರ ಬೆಂಗಳೂರಿನಲ್ಲಿ ವರಿಷ್ಠರನ್ನು ಭೇಟಿಯಾಗಲಿರುವದಾಗಿ ಚಂದ್ರಕಲಾ ‘ಶಕ್ತಿ’ಗೆ ತಿಳಿಸಿದರು. ಅದರಂತೆ ಜೈಜಗದೀಶ್ ಇಂದು ಸಂಜೆ ಕೆಪಿಸಿಸಿ ಕಚೇರಿಯಿಂದ ತಮ್ಮ ಸಹೋದರಿ ಚಂದ್ರಕಲಾ ಪರವಾಗಿ ‘ಬಿ’ ಫಾರಂ ಪಡೆದುಕೊಂಡಿದ್ದಾರೆ.

ಸುಳ್ಳಾದ ವದಂತಿ

ಈ ನಡುವೆ, ಚಂದ್ರಕಲಾಗೆ ಟಿಕೆಟ್ ಸಿಕ್ಕಿದರೂ ಅವರು ಸ್ಪರ್ಧಿಸುವದಿಲ್ಲ ಎನ್ನುವ ವದಂತಿ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಇಂದು ಕೇಳಿಬಂದಿತ್ತು. ಈ ಕುರಿತು ಚಂದ್ರಕಲಾ ಅವರಲ್ಲಿ ಪ್ರಶ್ನಿಸಿದಾಗ “ಇದು ಕೇವಲ ವದಂತಿ, ತನಗೆ ಚುನಾವಣೆ ಎದುರಿಸುವ ಶ್ರೀಮಂತಿಕೆಯಿದೆ. ಆದರೆ, ಇನ್ನು ಕೆಲವೇ ದಿನಗಳು ಮತದಾನಕ್ಕೆ ಬಾಕಿಯಿರುವದರಿಂದ ಮನೆ, ಮನೆಗಳಿಗೆ ತೆರಳಲು ಅಸಾಧ್ಯವಾಗಿದೆ. ಆದರೆÀ, ಮಡಿಕೇರಿ ಕ್ಷೇತ್ರದಲ್ಲಿ ತನ್ನನ್ನು ಎಲ್ಲರಿಗೂ ಗೊತ್ತಿದೆ. ಪ್ರಚಾರದ ಅವಧಿ ಕಡಿಮೆಯಿರುವದರಿಂದ ತನ್ನನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತೇನೆ’ ಎಂದು ಅವರು ಆಶಯ ವ್ಯಕ್ತಪಡಿಸಿದರು. ಮಂಗಳವಾರ ನಾಮಪತ್ರ ಸಲ್ಲಿಸಲಿರುವದಾಗಿ ತಿಳಿಸಿದರು.

ಮುತ್ತಪ್ಪ ಅವರಿಗೆ ತಪ್ಪಿದ್ದೇಕೆ?

ಮತ್ತೋರ್ವ ಟಿಕೆÀಟ್ ಆಕಾಂಕ್ಷಿಯಾಗಿದ್ದ ನಾಪಂಡ ಮುತ್ತಪ್ಪ ಅವರು ಪಕ್ಷೇತರರಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರಲ್ಲ? ಎಂಬ ‘ಶಕ್ತಿ’ ಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಂದ್ರಕಲಾ “ ನಾಪಂಡ ಮುತ್ತಪ್ಪ ಅವರಿಗೆ ಟಿಕೆÀಟ್ ದೊರಕಿದ್ದರೂ ನಾನು ಅವರ ಪರ ಕೆಲಸ ಮಾಡುತ್ತಿದ್ದೆ. ಈಗ ನನಗೆ ಟಿಕೆÀಟ್ ದೊರೆತಿರುವ ಈ ಸಂದರ್ಭ ಮುತ್ತಪ್ಪ ಅವರು ನನ್ನನ್ನು ಬೆಂಬಲಿಸುವಂತೆ ಈ ಮೂಲಕ ಕೋರುತ್ತೇನೆ” ಎಂದು ಚಂದ್ರಕಲಾ ನುಡಿದರು.

ಈ ನಡುವೆ ‘ಶಕ್ತಿ’ಗೆ ತಿಳಿದುಬಂದಂತೆ ಮುತ್ತಪ್ಪ ಅವರ ಹೆಸರು ಮುಂಚೂಣಿಯಲ್ಲಿದ್ದರೂ ಟಿ.ವಿ.ಸಂದರ್ಶನವೊಂದರಲ್ಲಿ ತನಗೆ ಟಿಕೆಟ್ ಸಿಗದಿದ್ದುದಕ್ಕೆ ಕೆಪಿಸಿಸಿ ವಿರುದ್ಧ ಮುತ್ತಪ್ಪ ವಾಗ್ದಾಳಿ ನಡೆಸಿದ್ದುದನ್ನು ಹಲವರು ಸಿ.ಡಿ. ಮಾಡಿ ಕೆಪಿಸಿಸಿ ಗೆ ಕಳುಹಿಸಿದ್ದು ಅದರಿಂದಾಗಿ ಅವರಿಗೆ ಟಿಕೆಟ್ ಕೈ ತಪ್ಪಿರುವದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ.