ಗೋಣಿಕೊಪ್ಪ ವರದಿ, ಏ. 22 : ತಿತಿಮತಿ ಪ್ರೌಢಶಾಲಾ ಮೈದಾನದಲ್ಲಿ ಯರವ ಸಮಾಜದ ವತಿಯಿಂದ ನಡೆದ ಕಾಳಕೊಟ್ಲತ್ಲೇರಂಡ ಕ್ರಿಕೆಟ್ ಕಪ್ ಟೂರ್ನಿಯಲ್ಲಿ ಮೆಟ್ರೋಸಿಟಿ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಫೈನಲ್ನಲ್ಲಿ ಸೋಲನುಭವಿಸಿದ ಕಾರೆಕಂಡಿ ತಂಡವು ರನ್ನರ್ ಅಪ್ ಮೂಲಕ ತೃಪ್ತಿಪಟ್ಟುಕೊಂಡಿದೆ.ಭಾನುವಾರ ಸಂಜೆ ನಡೆದ ಅಂತಿಮ ಹಣಾಹಣಿಯಲ್ಲಿ ಮೆಟ್ರೋಸಿಟಿ ತಂಡವು ಕಾರೆಕಂಡಿ ತಂಡವನ್ನು 33 ರನ್ಗಳಿಂದ ಸೋಲಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಮೊದಲು ಬ್ಯಾಟ್ ಮಾಡಿದ ಮೆಟ್ರೋಸಿಟಿ ನಿಗಧಿತ 5 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 54 ರನ್ ಗಳಿಸಿತು. ಕಾರೆಕಂಡಿ 6 ವಿಕೆಟ್ ಕಳೆದುಕೊಂಡು ಕೇವಲ 21 ರನ್ಗಳಿಸಿ ಸೋಲೊಪ್ಪಿಕೊಂಡಿತು. ಮೊದಲ ಸೆಮಿ ಫೈನಲ್ನಲ್ಲಿ ಮೆಟ್ರೋಸಿಟಿ ತಂಡವು ಕುಟ್ಟಿ ಫ್ರೆಂಡ್ಸ್ ವಿರುದ್ಧ 23 ರನ್ಗಳಿಂದ ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿತು. ಮೆಟ್ರೋ 6 ವಿಕೆಟ್ಗೆ 53 ರನ್ ಗಳಿಸಿತು. ಕುಟ್ಟಿ ಫ್ರೆಂಡ್ಸ್ 7 ವಿಕೆಟ್ ನಷ್ಟಕ್ಕೆ 30 ರನ್ಗಳನಷ್ಟೆ ಸೇರಿಸಿತು. 2 ಸೆಮಿಯಲ್ಲಿ ಕಾರೆಕಂಡಿ ತಂಡವು ನಿಶಿ ಫ್ರೆಂಡ್ಸ್ ವಿರುದ್ಧ 4 ರನ್ಗಳಿಂದ ಜಯಿಸಿತು. ಕಾರೆಕಂಡಿ 4 ವಿಕೆಟ್ಗೆ 49 ರನ್ ಸೇರಿಸಿತು. ನಿಶಿ ಫ್ರೆಂಡ್ಸ್ 7 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿ ಸೋಲನುಭವಿಸಿತು.ಮಹಿಳೆಯರಿಗೆ ನಡೆದ ಹಗ್ಗಜಗ್ಗಾಟದಲ್ಲಿ ಚೆನ್ನಂಗಿ ಚಾಮುಂಡೇಶ್ವರಿ ತಂಡ ಪ್ರಥಮ, ಬಂಬುಕಾಡು ದ್ವಿತೀಯ ಸ್ಥಾನ ಪಡೆದುಕೊಂಡಿತು.