ಶನಿವಾರಸಂತೆ, ಏ. 22: ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಭಾನುವಾರ 20 ಕೆ.ಜಿ. ಹಸಿಮೆಣಸಿನ ಕಾಯಿಗೆ ರೂ. 170-320 ದರ ಸಿಕ್ಕಿತು.
ಜಿ4 ಬಿಳಿ ಪ್ರಿಯಾಂಕ ಮೆಣಸಿನಕಾಯಿಗೆ ರೂ. 170, ಪ್ರಿಯಾಂಕ, ಗುಂಟೂರಿಗೆ ರೂ. 200 ಹಾಗೂ ಉಲ್ಕಾ ಮೆಣಸಿನಕಾಯಿಗೆ ರೂ. 320 ದರ ದೊರೆತಿದ್ದು, ರೈತರ ಮೊಗದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿತ್ತು. ವಾರದಲ್ಲಿ ಶುಕ್ರವಾರ, ಶನಿವಾರ, ಭಾನುವಾರ 3 ದಿನವೂ ಮೆಣಸಿನಕಾಯಿ ಸಂತೆ ನಡೆಯುತ್ತದೆ. ಸುತ್ತ ಮುತ್ತಲ ವಿವಿಧ ಗ್ರಾಮಗಳಿಂದ ರೈತರು ನಸುಕಿನಲ್ಲೇ ವಿವಿಧ ವಾಹನಗಳಲ್ಲಿ ಮೆಣಸಿನಕಾಯಿ ತುಂಬಿಸಿಕೊಂಡು ಬರುತ್ತಾರೆ. ವ್ಯಾಪಾರಿಗಳು ನಿಗದಿಪಡಿಸಿದ ದರಕ್ಕೆ ವ್ಯಾಪಾರ ಕುದುರಿಸಲೇಬೇಕಾಗುತ್ತದೆ. ಹಸಿಮೆಣಸಿನಕಾಯಿ ಬೇಗನೆ ಕೊಳೆಯುವ ಬೆಳೆಯಾದ ಕಾರಣ ವಿಧಿ ಇಲ್ಲದೇ ಮಾರಲೇಬೇಕಾಗುತ್ತದೆ.
ಈ ವರ್ಷ ಆರಂಭದಿಂದಲೂ ಹಸಿಮೆಣಸಿನಕಾಯಿ ದರ ಕುಸಿತದಿಂದ ಈ ವಿಭಾಗದ ರೈತರು ತೀರಾ ಹತಾಶರಾಗಿದ್ದಾರೆ. ಕಳೆದ ವರ್ಷ ದರ ಸಮಾಧಾನಕರವಾಗಿತ್ತು. ಈ ವರ್ಷವೂ ದರ ಹೆಚ್ಚಾಗಬಹುದೆಂಬ ನಿರೀಕ್ಷೆಯಿಂದ ರೈತರು ಅಧಿಕ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆದಿದ್ದು, ಬೇಡಿಕೆ ಕಡಿಮೆಯಾಗಿರುವದೇ ದರ ಕುಸಿತಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.
‘ರೈತರ ಮಳೆಗಾಲದ ಜೀವನ ನಿರ್ವಹಣೆಯ ಹಸಿಮೆಣಸಿನಕಾಯಿ 3 ತಿಂಗಳ ಬೆಳೆ. 2 ದಿನಗಳಿಗೊಮ್ಮೆಯಾದರೂ ನೀರು ಹಾಕಲೇಬೇಕು. ಮಳೆ ಇಲ್ಲ, ಹೊಳೆಕೆರೆ ಬತ್ತಿ ಹೋಗಿವೆ. ಮೆಣಸಿನ ಕಾಯಿ ಕುಯ್ಯುವ ಕೂಲಿಯಾಳಿಗೆ ದಿನಕ್ಕೆ ರೂ. 250 ಸಂಬಳ ರೂಢಿಯಂತೆ ವರ್ಷಾನು ವರ್ಷ ಮಾಡಿಕೊಂಡು ಬಂದ ಬೇಸಿಗೆ ಕಾಲದ ವ್ಯವಸಾಯ ಬದಲಾಯಿಸುವಂತಿಲ್ಲ. ಖರ್ಚು ಜಾಸ್ತಿ, ಆದಾಯ ಕಡಿಮೆಯಾಗಿದೆ’ ಎನ್ನುತ್ತಾರೆ ಹಾರಳ್ಳಿ ಗ್ರಾಮದ ಹೆಚ್.ಎಂ. ರಂಗಸ್ವಾಮಿ ಹಾಗೂ ಬೆಂಬಳೂರು ಗ್ರಾಮದ ಗೋಪಾಲ್.