ವೀರಾಜಪೇಟೆ, ಏ. 22: ವೀರಾಜಪೇಟೆ ಸಮೀಪದ ಹೆಗ್ಗಳ ಅಯ್ಯಪ್ಪ ಭಗವತಿ ದೇವಾಲಯದಲ್ಲಿ ತಾ. 21 ರಿಂದ ಪ್ರಾರಂಭಗೊಂಡ ಉತ್ಸವದಲ್ಲಿ ಪಟ್ಟಣಿ, ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ಜರುಗಿದವು. ತಾ. 22 ರಂದು ದೊಡ್ಡ ಹಬ್ಬದ ಪ್ರಯುಕ್ತ ದೇವರ ಕಾಡಿನಲ್ಲೆ ನೆಲೆನಿಂತಿರುವ ಅಯ್ಯಪ್ಪ ದೇವರ ಉತ್ಸವವು ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಹೆಗ್ಗಳ, ಬೇಟೋಳಿ, ಆರ್ಜಿ ಗ್ರಾಮಸ್ಥರುಗಳು ಪ್ರತಿವರ್ಷದಂತೆ ಈ ವರ್ಷವು ಅಯ್ಯಪ್ಪ ದೇವರಿಗೆ ವಿಶೇಷ ಪೂಜೆ
ಸಲ್ಲಿಸಿದರು. ಇಂದು ಅಪರಾಹ್ನ ನಡೆದ ಮಹಾ ಪೂಜಾ ಸೇವೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು, ಭಾಗವಹಿಸಿದ್ದರು. ಪೂಜಾ ಸೇವೆಯ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಉತ್ಸವದಲ್ಲಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಮ್ಮಣಕುಟ್ಟಂಡ ಜಿ. ಬೋಪಣ್ಣ, ಕಾರ್ಯಾಧ್ಯಕ್ಷ ಪೊರೇರ ಬಿದ್ದಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹಾಗೂ ದೇವಾಲಯದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರುಗಳು ಹಾಜರಿದ್ದರು. ತಾ. 25 ರಂದು ಶುದ್ಧ ಕಲಶ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.