ಮಡಿಕೇರಿ, ಏ. 22: ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಂ ಜಮಾಅತ್ ಮಾದರಿಯಲ್ಲೇ ಕರ್ನಾಟಕದ ‘ಕರ್ನಾಟಕ ಮುಸ್ಲಿಂ ಜಮಾಅತ್’ ತಾ. 28 ರಂದು ಬೆಂಗಳೂರಿನಲ್ಲಿ ಶುಭಾರಂಭಗೊಳ್ಳಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ವಿದ್ವಾಂಸರ ಒಕ್ಕೂಟದ ಪದಾಧಿಕಾರಿಗಳು, ಅಂದು ಪೂರ್ವಾಹ್ನ 9 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಮಾವೇಶದಲ್ಲಿ ಅಖಿಲ ಭಾರತ ಮುಸ್ಲಿಂ ಉಲೆಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಅಲ್ ಇಂಡಿಯಾ ಮುಸ್ಲಿಂ ಜಮಾಅತ್‍ನ ಮುಖಂಡ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಲಿರುವ ಸಾವಿರಾರು ಸಂಘಟನಾ ಪ್ರತಿನಿಧಿಗಳ ಸಮ್ಮುಖದಲ್ಲಿ ಸಂಘಟನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅಹ್ಲುಸ್ಸುನ್ನತಿ ವಲ್ ಜಮಾಅತ್‍ನ ತತ್ವಾದರ್ಶಗಳಿಗೆ ಅನುಗುಣವಾಗಿ ಈಗಾಗಲೇ ಮುಸ್ಲಿಂ ವಿದ್ಯಾರ್ಥಿ ಶಕ್ತಿಯನ್ನು ಸಂಘಟಿಸಲು ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಹಾಗೂ ಯುವಜನರಿಗಾಗಿ ಸುನ್ನಿ ಯುವಜನ ಸಂಘಗಳು ಕಳೆದ ಎರಡೂವರೆ ದಶಕಗಳಿಂದ ರಾಜ್ಯದಲ್ಲಿ ಕಾರ್ಯಾಚರಿಸುತ್ತಿದ್ದು, ಇದೀಗ ಮುಸ್ಲಿಂ ಸಮಾಜದ ಸಾಮಾಜಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಯೋಜನೆಗಳೊಂದಿಗೆ, ಸಮುದಾಯದ ಬಹುಜನರ ಕ್ರಿಯಾ ವೇದಿಕೆಯಾಗಿ ಮುಸ್ಲಿಂ ಜಮಾಅತ್ ಕಾರ್ಯಾರಂಭಿಸಲಿದೆ ಎಂದು ಅವರು ಹೇಳಿದರು.ಈಗಾಗಲೇ ಕೇರಳ, ತಮಿಳುನಾಡು, ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮುಸ್ಲಿಂ ಜಮಾಅತ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಆಲ್ ಇಂಡಿಯಾ ಮುಸ್ಲಿಂ ಜಮಾಅತ್ ದೇಶದ ಮುಸಲ್ಮಾನರ ಅತಿ ದೊಡ್ಡ ಒಕ್ಕೂಟವಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯನಿರ್ವಹಿಸಲಿದೆ ಎಂದರು.

ಜಮಾಅತ್‍ನ ಅಡ್ಹಾಕ್ ಸಮಿತಿಯನ್ನು ಈಗಾಗಲೇ ರಚಿಸಲಾಗುತ್ತಿದ್ದು, ಶೀಘ್ರದಲ್ಲೇ ವಿವಿಧ ಜಿಲ್ಲಾ ಸಮಿತಿಗಳನ್ನು ರಚಿಸಿ ಆಯ್ದ ಕೌನ್ಸಿಲ್ ಮೂಲಕ ಅಧಿಕೃತವಾದ ರಾಜ್ಯ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗುವದೆಂದ ಅವರು, ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಜಂಇಯ್ಯತುಲ್ ಉಲಮಾ, ಎಸ್‍ವೈಎಸ್, ಎಸ್‍ಎಸ್‍ಎಫ್, ಜಂಇಯ್ಯತುಲ್ ಮುಅಲ್ಲಿಮೀನ್, ಎಸ್‍ಇಡಿಸಿ, ಎಸ್‍ಎಂಎ ಸಂಘಟನೆಗಳ ರಾಜ್ಯ ಮತ್ತು ಜಿಲ್ಲಾಮಟ್ಟದ ಪ್ರತಿನಿಧಿಗಳು ಭಾಗವಹಿಸಲಿದ್ದು, ಕೊಡಗು ಜಿಲ್ಲೆಯಿಂದ ಆಯ್ದ ಒಂದು ಸಾವಿರಕ್ಕೂ ಅಧಿಕ ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭ ಕಾಶ್ಮೀರದ ಕಥುವಾದಲ್ಲಿ ಬಾಲಕಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಖಂಡಿಸಿದ ಅವರುಗಳು, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಮಾನವೀಯ ಕೃತ್ಯಗಳು ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ವಿವಿಧ ಸುನ್ನಿ ಸಂಘಟನೆಗಳ ಪ್ರಮುಖರಾದ ಕೆ.ಎ. ಮಹ್‍ಮೂದ್ ಮುಸ್ಲಿಯಾರ್, ಟಿ.ಹೆಚ್. ಮೊಹಿದ್ದೀನ್ ಕುಟ್ಟಿ ಹಾಜಿ, ಎಂ.ವೈ. ಅಬ್ದುಲ್ ಹಫೀಳ್ ಸಅದಿ, ಪಿ.ಎ.ಯೂಸುಫ್ ಕೊಂಡಂಗೇರಿ ಹಾಗೂ ಹನೀಫ್ ಸಖಾಫಿ ಹಾಜರಿದ್ದರು.