ಗೋಣಿಕೊಪ್ಪ ವರದಿ, ಏ. 23: ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವನ್ನು ಮೇ 1 ರಂದು ಬೆಳಿಗ್ಗೆ 10.30 ಗಂಟೆಗೆ ಪೂಕೊಳ ಗ್ರಾಮದ ಧಾರಾಮಹೇಶ್ವರ ದೇವಸ್ಥಾನದ ಆವರಣದಲ್ಲಿ ಆಚರಿಸಲಾಗುವದು ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಮೋಟಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಕೊಡವ ಸಮಾಜ ಮತ್ತು ಪಾಕೇರಿನಾಡು ಶ್ರೀ ಧಾರಾಮಹೇಶ್ವರ ದೇವಸ್ಥಾನ ಸಮಿತಿ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾಳಿಮಾಡ ಮೋಟಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಕಾಳಿಮಾಡ ಶಿವಪ್ಪ, ಅಖಿಲ ಕೊಡವ ಸಮಾಜದ ಕಾರ್ಯಾಧ್ಯಕ್ಷ ಪ್ರೊ. ಇಟ್ಟೀರ ಬಿದ್ದಪ್ಪ, ಜನ್ಮೋತ್ಸವ ಸಮಿತಿ ಸಂಚಾಲಕ ಅಡ್ಡಂಡ ಕಾರ್ಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ದೇವಸ್ಥಾನ ಸಮಿತಿ ಖಜಾಂಚಿ ಕರ್ತಮಾಡ ಅಜಿತ್ ಮಾತನಾಡಿ, ಜನ್ಮೋತ್ಸವದ ಅಂಗವಾಗಿ ಸೆಪ್ಟೆಂಬರ್ ತಿಂಗಳವರೆಗೆ ಮಾಸಿಕವಾಗಿ ಜಿಲ್ಲೆಯ ಹಲವೆಡೆ ಕಾರ್ಯಕ್ರಮ ನಡೆಯಲಿದೆ. ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರು ಕೇವಲ ಕವಿ ಮಾತ್ರವಲ್ಲ ಅವರೊಬ್ಬ ನಾಟಕಕಾರ ಹಾಗೂ ಹರಿಕಥೆಗಳಿಗೆ ಕೂಡ ಪ್ರಸಿದ್ಧರಾಗಿದ್ದರು. ಅವರ ಆದರ್ಶಗಳನ್ನು ನೆನಪು ಮಾಡಿಕೊಳ್ಳುವ ನಿಟ್ಟಿನಲ್ಲಿ ಜನ್ಮೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ದೇವತಕ್ಕ ಕುಪ್ಪಣಮಾಡ ತಮ್ಮಯ್ಯ ಹಾಗೂ ನಿರ್ದೇಶಕ ಕರ್ತಮಾಡ ಸಂಪತ್ ಇದ್ದರು.