ಮಡಿಕೇರಿ, ಏ. 23: ಬರುವ ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಯ ಮೂರನೆಯ ದಿನವಾದ ಇಂದು ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ನಾಲ್ವರು ಅಭ್ಯರ್ಥಿಗಳಂತೆ ಒಟ್ಟು ಎಂಟು ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾದೇಶಕ ಪಕ್ಷ ಜೆಡಿಎಸ್ ಅಭ್ಯರ್ಥಿಯೊಂದಿಗೆ ಓರ್ವ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಸಹಿತ ಇಬ್ಬರು ಪಕ್ಷೇತರರು ಉಮೇದುವಾರಿಕೆ ಸಲ್ಲಿಸಿದರು.ಅತ್ತ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಹಿತ ಎಂ.ಇ.ಪಿ. ಪಕ್ಷದಿಂದ ಹಿಂದಿನ ವೀರಾಜಪೇಟೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿದ್ದ ಹೆಚ್.ಡಿ. ಬಸವರಾಜ್ ಅವರು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಇನ್ನಿಬ್ಬರು ಪಕ್ಷೇತರರಾಗಿ ಈ ಕ್ಷೇತ್ರದಿಂದ ಕಣಕ್ಕೆ ದುಮುಕಿದ್ದು, ಹೆಚ್.ಡಿ. ದೊಡ್ಡಯ್ಯ ಹಾಗೂ ಎಂ.ಕೆ. ನಂಜಪ್ಪ ಎಂಬವರು ಉಮೇದುವಾರಿಕೆಯೊಂದಿಗೆ ಸ್ಪರ್ಧೆ ಬಯಸಿದ್ದಾರೆ.

ಹೀಗಾಗಿ ಇಂದಿನ ಪ್ರಕ್ರಿಯೆಯಲ್ಲಿ ಉಭಯ (ಮೊದಲ ಪುಟದಿಂದ) ಕಡೆಯಿಂದ ತಲಾ ನಾಲ್ವರಂತೆ ಒಟ್ಟು ಎಂಟು ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇಲ್ಲಿ ಜೀವಿಜಯ ಅವರು ಒಟ್ಟು 3 ಪ್ರತಿಗಳಲ್ಲಿ ಉಮೇದುವಾರಿಕೆಯೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ಅರುಣ್ ಮಾಚಯ್ಯ ಹಾಗೂ ಬಂಡಾಯ ಸ್ಪರ್ಧಿ ನಾಪಂಡ ಮುತ್ತಪ್ಪ ತಲಾ ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಎಲ್ಲರು ತಲಾ ಒಂದೊಂದು ನಾಮಪತ್ರ ಸಲ್ಲಿಸಿರುವದಾಗಿ ಸಂಬಂಧಿಸಿದ ಚುನಾವಣಾಧಿಕಾರಿಗಳು ಖಚಿತಪಡಿಸಿದ್ದಾರೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರದ ಚುನಾವಣಾಧಿಕಾರಿ ಕೆ. ರಾಜು ನೇತೃತ್ವದಲ್ಲಿ ಕಾರ್ಯನಿರ್ವಹಿಸಿದರು. ಬೆಳಿಗ್ಗೆಯಿಂದ ಸಂಜೆ ಮೂರು ಗಂಟೆ ಕಳೆದರೂ, ಚುನಾವಣಾ ಪ್ರಕ್ರಿಯೆ ಮುಂದುವರಿದಿದ್ದು, ರಕ್ಷಣೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಬಳಗವನ್ನು ಮಾತ್ರ ಅನ್ನ, ನೀರಿಗೂ ಕೇಳುವವರೇ ಇರಲಿಲ್ಲ. ಇನ್ನು ದೃಶ್ಯ ಮಾಧ್ಯಮದೊಂದಿಗೆ ಪತ್ರಕರ್ತರ ಪಾಡು ಅನುಭವಿಸುವವರಿಗೆ ಮಾತ್ರ ಅರಿವಾದಂತ್ತಿತ್ತು. ತಾ. 24ರಂದು (ಇಂದು) ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಈಗಾಗಲೇ ನಾಲ್ಕಾರು ಮಂದಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲು ಬಂದರಾದರೂ ತಿಳುವಳಿಕೆ ಕೊರತೆಯಿಂದ ಹಿಂತೆರಳಿದ ದೃಶ್ಯ ಎದುರಾಯಿತು.

ನಾಳೆ ಪರಿಶೀಲನೆ : ಇಂದು ಎಂಟು ಮಂದಿ ಸ್ಪರ್ಧೆ ಬಯಸಿದರೆ, ಪ್ರಥಮವಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಹಾಲೀ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಶುಕ್ರವಾರ ಉಮೇದುವಾರಿಕೆ ಸಲ್ಲಿಸಿದ್ದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಸಂಕೇತ್ ಪೂವಯ್ಯ ಆ ಪಕ್ಷದಿಂದ ಶನಿವಾರ ನಾಮಪತ್ರ ಸಲ್ಲಿಸಿದ್ದರು. ಹೀಗೆ ಇದುವರೆಗೆ ಒಟ್ಟು 10 ಮಂದಿ ಚುನಾವಣಾ ಅಖಾಡಕ್ಕೆ ಇಳಿದಿದ್ದು, ತಾ. 25ರಂದು (ನಾಳೆ) ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಯಲಿದೆ. ತಾ. 27ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ಅಂತಿಮವಾಗಿ ಕಣದಲ್ಲಿ ಉಳಿಯುವವರು ಬರುವ ಮೇ 12ರಂದು ಚುನಾವಣೆ ಎದುರಿಸಲಿದ್ದು, ಮೇ 17ರಂದು ಮತಗಳ ಎಣಿಕೆ ನಡೆಯಲಿದೆ. ಹೀಗಾಗಿ ಸ್ಪರ್ಧೆ ಬಯಸಿರುವ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರಾಗಿ ಉಳಿಯುವವರು ಮುಂದಿನ 20 ದಿನಗಳಲ್ಲಿ ಮತದಾರರನ್ನು ಸೆಳೆಯಲು ಕಾಲಾವಕಾಶವಿದ್ದು, ಅಲ್ಪ ಅವಧಿಯಲ್ಲಿ ಎಲ್ಲ ಪ್ರಕ್ರಿಯೆಗೆ ತೆರೆ ಬೀಳಲಿದೆ.