ಕುಶಾಲನಗರ, ಏ. 23: ಚುನಾವಣಾ ನೀತಿಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವ ನಿಟ್ಟಿನಲ್ಲಿ ಜಿಲ್ಲೆಯ ಗಡಿಭಾಗಗಳಲ್ಲಿ ಸ್ಥಿರ ಕಣ್ಗಾವಲು ತಂಡ ಕಾರ್ಯಾಚರಣೆ ನಡೆಸುತ್ತಿದೆ. ಕುಶಾಲನಗರ ಕೊಪ್ಪ ಗಡಿಭಾಗದಲ್ಲಿ ದಿನದ 24 ಗಂಟೆ ಕಾಲ ಮೂರು ಪಾಳಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಜಿಲ್ಲೆಗೆ ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿರುವ ದೃಶ್ಯ ಕಾಣಬಹುದು.
ಕುಶಾಲನಗರ ಮೂಲಕ ವಾರಾಂತ್ಯದಲ್ಲಿ ಗಂಟೆಗೆ ಅಂದಾಜು ಸಾವಿರಕ್ಕೂ ಅಧಿಕ ವಾಹನಗಳು ಕೊಪ್ಪ ಗೇಟ್ ಮೂಲಕ ಸಂಚರಿಸುತ್ತಿದ್ದು, ವಾಹನ ದಟ್ಟಣೆ ಅಧಿಕಗೊಳ್ಳುವದರೊಂದಿಗೆ ತಪಾಸಣಾ ಕಾರ್ಯ ಸಂದರ್ಭ ನೂರಾರು ವಾಹನಗಳು ಸಾಲಿನಲ್ಲಿ ನಿಲ್ಲಬೇಕಾಗುವ ಪ್ರಮೇಯವೂ ಉಂಟಾಗುತ್ತಿದೆ. ಕೆಲವೊಂದು ವಾಹನ ಮಾಲೀಕರು ತಪಾಸಣೆಗೆ ಸಹಕರಿಸದೆ ತಂಡದ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ ಪ್ರಕರಣ ನಡೆದಿದ್ದು, ಈಗಾಗಲೇ ಕೆಲವು ಪ್ರಕರಣಗಳು ದಾಖಲಾಗಿವೆ.
ಕೊಪ್ಪ ಗಡಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಚುನಾವಣಾ ಅಧಿಕಾರಿ, ಸಿಬ್ಬಂದಿಗಳ ತಂಡ ತಮ್ಮ ಕರ್ತವ್ಯದೊಂದಿಗೆ ಸಮೀಪದಲ್ಲಿರುವ ಕಾವೇರಿ ಸೇತುವೆ ಮೇಲಿಂದ ನದಿಗೆ ತ್ಯಾಜ್ಯ ಎಸೆಯುವ ಜನರ ಮೇಲೆ ನಿಗಾವಹಿಸುವದರೊಂದಿಗೆ ಅವರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವದು ಕೂಡ ಈ ಭಾಗದ ಜನರಿಂದ ಮೆಚ್ಚುಗೆಗೆ ಒಳಗಾಗಿದೆ.