ಮಡಿಕೇರಿ, ಏ. 23: ವಿಧಾನಸಭೆ ಚುನಾವಣೆ ಮತದಾನ ಮೇ 12 ರಂದು ನಡೆಯಲಿದ್ದು, ಈ ಹಿನ್ನೆಲೆ ಜಿಲ್ಲೆಯಾದ್ಯಂತ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮತ್ತಷ್ಟು ಚುರುಕುಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿ ಗಳಿಗೆ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಅಧ್ಯಕ್ಷರು ಹಾಗೂ ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಸ್ಪಷ್ಟ ಸೂಚನೆ ನೀಡಿದ್ದಾರೆ.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸ್ವೀಪ್ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳ ಪ್ರಗತಿ ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು.
ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಸಂದರ್ಭ ನಗರಸಭೆ ಮತ್ತು ಪಟ್ಟಣ ಪ್ರದೇಶಗಳಲ್ಲಿ ಶೇಕಡವಾರು ಮತದಾನದ ಪ್ರಮಾಣ ಕಡಿಮೆಯಾಗಿದ್ದು, ಇಂತಹ ಪ್ರದೇಶಗಳಲ್ಲಿ ಹೆಚ್ಚಿನ ಮತದಾನ ವಾಗಲು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಅಧಿಕಾರಿಗಳಿಗೆ ಜಿ.ಪಂ. ಸಿಇಓ ನಿರ್ದೇಶನ ನೀಡಿದರು. ಯುವ ಮತದಾರರಲ್ಲಿ ಜಾಗೃತಿ ಮೂಡಿಸುವದು, ಆಶುಭಾಷಣ ಸ್ಪರ್ಧೆ ಏರ್ಪಡಿಸುವದು, ಜಾಥಾ ಕೈಗೊಳ್ಳುವದು, ಮನೆ ಮನೆಗೆ ಭೇಟಿ ನೀಡಿ ಮತದಾನದ ಮಹತ್ವದ ಬಗ್ಗೆ ಮಾಹಿತಿ ನೀಡುವದು, ವಿಚಾರ ಸಂಕಿರಣ ಆಯೋಜಿಸುವದು, ಸಹಿ ಸಂಗ್ರಹ ಮಾಡುವದು, ವಿಕಲಚೇತನ ರಿಂದ ತ್ರಿಚಕ್ರ ವಾಹನದ ಮೂಲಕ ಬೈಕ್ ರ್ಯಾಲಿ ಏರ್ಪಡಿಸುವದು, ಜಿಲ್ಲೆಯಲ್ಲಿರುವ ಕೈಗಾರಿಕ ಪ್ರದೇಶಗಳಲ್ಲಿ ಅರಿವು ಮೂಡಿಸುವದು, ಕಾರ್ಮಿಕರಿಗೆ ಮತದಾನದ ಬಗ್ಗೆ ಮಾಹಿತಿ ನೀಡುವದು. ರೇಡಿಯೊ ಕಾರ್ಯಕ್ರಮ ಹಮ್ಮಿಕೊಳ್ಳುವದು, ಬಸ್ ನಿಲ್ದಾಣದಲ್ಲಿ ಮಾಹಿತಿ ನೀಡುವದು. ಚುನಾವಣಾ ಆಯೋಗ ನೀಡಿರುವ ಮತದಾನದ ಮಹತ್ವ ಕುರಿತ ಸಂದೇಶಗಳನ್ನು ಜಿಲ್ಲೆಯಲ್ಲಿರುವ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಮಾಡಲು ಕ್ರಮವಹಿಸುವದು, ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.
ವಿವಿಧ ಇಲಾಖೆಗಳಿಂದ ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ಪ್ರತಿನಿತ್ಯ ಮಾಹಿತಿ ಒದಗಿಸಬೇಕು. ಜಿಲ್ಲೆಯಲ್ಲಿ ಶೇಕಡವಾರು ಮತದಾನ ಹೆಚ್ಚಳಕ್ಕೆ ವಿವಿಧ ಇಲಾಖೆ ಅಧಿಕಾರಿ ಗಳು ಕೈಜೋಡಿಸಿ ಕಾರ್ಯಕ್ರಮ ಆಯೋಜಿಸುವಂತೆ ಜಿ.ಪಂ.ಸಿಇಒ ಅವರು ಸ್ಪಷ್ಟ ನಿರ್ದೇಶನ ನೀಡಿದರು.
ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀಕಂಠಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್, ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕಿ ಮಂಜುಳಾ, ಪದವಿಪೂರ್ವ ಶಿಕ್ಷಣ ಉಪ ನಿರ್ದೇಶಕ ಜಯದೇವಯ್ಯ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯದೇವಿ ಗಲಗಲಿ, ಪೌರಾಯುಕ್ತೆ ಬಿ. ಶುಭ, ತಾ.ಪಂ. ಇಓ ಚೆಟ್ಟಿಯಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್, ಹಿರಿಯ ನಾಗರಿಕರ ಮತ್ತು ವಿಕಚೇತನರ ಕಲ್ಯಾಣ ಅಧಿಕಾರಿ ದೇವರಾಜು, ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಬೀರ್ ಬಾಷ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ನಗರಸಭೆಯ ಹಿರಿಯ ಆರೋಗ್ಯ ನೀರಿಕ್ಷಕ ಹೆಚ್.ಆರ್. ರಮೇಶ್, ಜಿ.ಪಂ. ಸಹಾಯಕ ಸಾಂಖ್ಯಿಕ ಅಧಿಕಾರಿ ನವೀನ್, ಸ್ವೀಪ್ ಕಾರ್ಯಕ್ರಮ ಸಂಯೋಜಕರಾದ ಸೂರಜ್, ಪೆಮ್ಮಯ್ಯ ಮತದಾನ ಮಹತ್ವ ಕುರಿತು ಇದುವರೆಗೆ ಆಯೋಜಿಸಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.