ಗೋಣಿಕೊಪ್ಪಲು, ಏ. 23: ದಕ್ಷಿಣ ಕೊಡಗಿನ ಶ್ರೀಮಂಗಲ ಬಸ್ ನಿಲ್ದಾಣದ ಬಳಿ ಜೆ.ಡಿ.ಎಸ್. ಬಹಿರಂಗ ಸಭೆ ಜರುಗಿತು. ಸಭೆಗೆ ಹೂಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಲಾಯಿತು.ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆ.ಡಿ.ಎಸ್ ಅಭ್ಯರ್ಥಿ, ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ ಕಾಫಿ ಬೆಳೆಗಾರನ ಸಮಸೈಗಳು ನಿರಂತರವಾಗಿದೆ. ಯುವಶಕ್ತಿಯನ್ನು ಇಬ್ಬಾಗ ಮಾಡಿ ಅವರ ಭಾವನೆಗಳನ್ನು ಕೆದಕುವ ಮೂಲಕ ನ್ಯಾಯಾಲಯದ ಮೆಟ್ಟಿಲು ಏರುವಂತೆ ಮಾಡಿದ್ದಾರೆ. ಸುಳ್ಳಿನ ಕಂತೆಯನ್ನು ಹೊತ್ತು ಬರುವ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಬಹಿರಂಗವಾಗಿ ಮತದಾರರು ಪ್ರಶ್ನೆಗಳನ್ನು ಕೇಳುವ ಅವಕಾಶ ಬಂದಿದೆ. ರಾಜ್ಯದಲ್ಲಿ ಕುಮಾರ ಸ್ವಾಮಿಯವರ ಸರ್ಕಾರ ಬರುವದು ಸಮೀಕ್ಷೆಯಿಂದ ದೃಢಪಟ್ಟಿದೆ ಎಂದರು.
ಗಣಪತಿ ಆತ್ಮಹತ್ಯೆಪ್ರಕರಣದಲ್ಲಿ ಹೆಚ್.ಡಿ. ಕುಮಾರ ಸ್ವಾಮಿ ನೊಂದ ಕುಟುಂಬದ ಪರ ನಿಂತಿದ್ದರು. ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು, ಇಲ್ಲಿಯ ಜನಪ್ರತಿನಿಧಿಗಳಿಂದ ಗಣಪತಿ ಆತ್ಮಹತೈ ಪ್ರಕರಣಕ್ಕೆ ನ್ಯಾಯ ಸಿಗಲಿಲ್ಲ, ಇದನ್ನು ತಾರ್ಕಿಕ ಅಂತ್ಯದವರೆಗೆ ಹೋರಾಟ ನಡೆಸಿ ಸಿ.ಬಿ.ಐ ಮೆಟ್ಟಿಲೇರುವಂತೆ ಮಾಡಿದ್ದೇವೆ. ರೈತ, ಶ್ರಮಿಕ ಇರುವ ಈ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆ ಆಗಲಿದೆ. ರೈತರ ಪಕ್ಷಕ್ಕೆ ಆಶೀರ್ವಾದ ಮಾಡುವಂತೆ ಸಂಕೇತ್ ಮನವಿ ಮಾಡಿದರು.
ಜೆ.ಡಿ.ಎಸ್. ಜಿಲ್ಲಾ ವಕ್ತಾರ ಮಚ್ಚಮಾಡ ಕಾರ್ಯಪ್ಪ ಮಾತನಾಡಿ ಶ್ರೀಮಂಗಲ ನಾಡು ಹೋರಾಟದ ತವರೂರು. ರೈತರ ಮೇಲೆ ಬರೆ ಎಳೆಯುತ್ತಿದ್ದರೂ ಈ ಭಾಗದ ಜನ ಪ್ರತಿನಿಧಿಗಳು ರೈತರ ಸಂಕಷ್ಟಕ್ಕೆ ಶ್ರಮಿಸಲಿಲ್ಲ ಸೂಕ್ಷ ಪರಿಸರತಾಣ ವಿಚಾರದಲ್ಲಿ ಶಾಸಕರು,ಸಂಸದರು ಜನತೆಯ ಹೋರಾಟಕ್ಕೆ ಬೆಂಬಲಿಸಲಿಲ್ಲ ಎಂದು ಆರೋಪಿಸಿದರು.
ಹೋರಾಟಗಾರ ಮಾಜಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕ್ರು ನಾಚಪ್ಪ ಮಾತನಾಡಿ ರೈತರ, ಕಾರ್ಮಿಕರ ಆಶಾ ಕಿರಣ ಕುಮಾರಸ್ವಾಮಿ ಅವರ ಭರವಸೆಯಂತೆ ರೈತರ ಸಾಲ ಮನ್ನವಾದಲ್ಲಿ ಕಾಫಿ ಬೆಳೆಗಾರರ ಸಮಸ್ಯೆ ನೀಗಲಿದೆ. ಕುಮಾರ ಸ್ವಾಮಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಬೆಳೆಗಾರರಾದ ನಮ್ಮನ್ನು ಗೌರವದಿಂದ ಮಾತನಾಡಿಸಿದ್ದಾರೆ. ಮತದಾರರು ಈ ಬಾರಿ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಿ ರೈತರ ಪಕ್ಷಕ್ಕೆ ಬೆಂಬಲಿಸಬೇಕೆಂದರು.
ಕೊಡಗು ಜಿಲ್ಲಾ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ, ಜಿಲ್ಲಾ ರೈತ ಸಂಘದ ಸಂಚಾಲಕರಾದ ಚಿಮ್ಮಂಗಡ ಗಣೇಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕ್ಷೇತ್ರ ಅಧ್ಯಕ್ಷರಾದ ಎಸ್.ಹೆಚ್ ಮತೀನ್, ಪಕ್ಷದ ಮುಖಂಡರುಗಳಾದ ಕಾಳೀಮಾಡ ದಿಲೀಪ್, ಉಳುವಂಗಡ ದತ್ತ, ಸಜನ್ ಉತ್ತಪ್ಪ, ಕರ್ತಮಾಡ ನರೇಂದ್ರ, ಹೆಚ್.ಎಂ ಚಂದ್ರ, ರೆನ್ನಿ, ಬಾಚೀರ ಸೋಮಣ್ಣ, ರೋಹನ್ ರೈತ ಮುಖಂಡರಾದ ಹ್ಯಾರಿ ಸೋಮೇಶ್, ಪರಮಾಲೆ ಗಣೇಶ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ಹಲವು ಯುವಕರು ರಾಷ್ಟ್ರೀಯ ಪಕ್ಷಗಳನ್ನು ತೊರೆದು ಜೆ.ಡಿ.ಎಸ್ ಸೇರ್ಪಡೆಗೊಂಡರು.