ಚೆಟ್ಟಳ್ಳಿ, ಏ. 23: ಕೊಡಗಿನಲ್ಲೇ ಪ್ರಸಿದ್ದಿ ಹೊಂದಿರುವ ವೀರಾಜಪೇಟೆ ಸಮೀಪದ ಚೆಂಬೆಬೆಳ್ಳೂರಿನ ವಾರ್ಷಿಕ ಬೋಡ್ ನಮ್ಮೆಯು ಶ್ರದ್ದಾ ಭಕ್ತಿಯಿಂದ ನೆರವೇರಿತು .ದೋಳ್ ಪಾಟ್, ಹುಲಿವೇಷಧಾರಿಗಳು, ಬಂಡ್ ಕಳಿ, ಹೆಣ್ಣಿನ ವೇಷದಾರಿಗಳ ಆತ್ಯಾಕರ್ಷಣಿಯ ಕುಣಿತ ವಿಶೇಷವಾಗಿತ್ತು.ವರ್ಷಂಪ್ರತಿ ನಡೆಯುವಂತೆ ಈ ವರ್ಷ ತಾ. 14ರಂದು ಹಬ್ಬದ ಕಟ್ಟು ಬೀಳಲಾಗಿ ತಾ. 20ರಂದು ಪಟ್ಟಣಿ ಹಬ್ಬ ಅಚರಿಸಲಾಗಿ ಪಣಿಕರ ಡೋಲಿನ ಕೊಟ್ಟು ಹಾಗೂ ಕೊಂಬು ಊದಿದ ನಂತರ ಊರಿನವರು ಸಂಪ್ರದಾಯದಂತೆ ಪಟ್ಟಣಿ ಮುರಿಯಲಾಯಿತು. ಹಬ್ಬದ ಅಂಗವಾಗಿ ಭದ್ರಕಾಳಿ ದೇವಾಲಯಕ್ಕೆ ತಳಿರು ತೋರಣಗಳಿಂದ ಶೃಂಗರಿಸಿದರೆ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಶೃಂಗರಿಸಲಾಗಿತ್ತು.
ಅಂದು ಬೇರಳಿ ಅಂಬಲದಲ್ಲಿ ಭದ್ರಕಾಳಿಯ ಒಂದು ಮುಡಿತೆರೆ ಕಟ್ಟಿ ಪೂಜಿಸಿ ದೇವರ ನೆಲೆಗೆ ಬಂದು ಕುಣಿಯಲಾಯಿತು. ತಾ. 21ರಂದು ಊರಿನ ಮೂರು ಕೇರಿಯಿಂದ ಬೆತ್ತದಿಂದ ಮಾಡಿದ ಮೂರು ಕುದುರೆಯೊಂದಿಗೆ ಊರಿನವರ ಸಮ್ಮುಖದಲ್ಲಿ ಅಂಬಲಕ್ಕೆ ಬಂದು ದೇವಾಲಯಕ್ಕೆ ಸೇರಲಾಯಿತು. ಬೊಳಕಾಟ್, ತೆಂಗಿನಕಾಯಿ ಎಳೆಯುವ ಸ್ಪರ್ಧೆ, ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾತ್ರಿ ಊರಿನವರು ಹರಕೆ ಹೊತ್ತವರು ಮೈಯಲ್ಲೆಲ್ಲ ಬಣ್ಣಬಳಿದು ಕೆಲವರು ಹುಲಿವೇಷ ಧಾರಿಗಳಾದರೆ, ವೇಷಕಟ್ಟಿ ಬೆಳಗಿನವರೆಗೆ ಮನೆಮನೆಗೆ ತೆರಳುವರು. ತಾ. 22ರಂದು ಸಂಜೆ ವೇಷಧಾರಿಗಳು ಅಂಬಲದಲ್ಲಿ ಸೇರಿದರು. ಊರಿನವರು ಹಾಡಿನೊಂದಿಗೆ ಡೋಲನ್ನು ಕೊಟ್ಟುತ್ತಾ ದೋಳ್ ಪಾಟ್ ನೊಂದಿಗೆ ಭದ್ರಕಾಳಿ, ಚಾಮುಂಡಿ ಹಾಗು ಮಕ್ಕಾಟ್ ಅಯ್ಯಪ್ಪ ಮೈಗೆ ಬಂದವರು ದೇವರ ಕಡತಲೆಯನ್ನು ಝಳಪಿಸುತ್ತಾ ಭದ್ರಕಾಳಿ ದೇವಾಲಯದೆಡೆಗೆ ನಡೆದರೆ, ಹಲವು ವೇಷಧಾರಿಗಳ ತಂಡ ಡೋಲಿನ ಕೊಟ್ಟಿಗೆ ಹೆಜ್ಜೆ ಹಾಕಿ ಕುಣಿಯತ್ತಾ ದೇವಾಲಯದೊಳಕ್ಕೆ ಪ್ರವೇಶಿಸಿ ದೇವರ ಗರ್ಭಗುಡಿಗೆ ಮೂರು ಪ್ರದಕ್ಷಿಣಿ ಬರಲಾಯಿತು.
ತಾ. 23ರಂದು ಸಾಂಪ್ರದಾಯಿಕ ಚೂಳೆ : ಅಂದು ಹೆಣ್ಣಿನ ವೇಶದಾರಿ ಹಾಗೂ ಹೆಣ್ಣು ಮಕ್ಕಳು ಅಂಬಲಕ್ಕೆ ಸೇರಿ ದೇವಾಲಯಕ್ಕೆ ಬರುವರು. ಎತ್ತು ಪೋರಾಟ, ತೆಂಗಿನಕಾಯಿಗೆ ಎಳೆವರು. ತಾ. 24ರಂದು (ಇಂದು) ಕಾರಮಡ್ಕೋ ಎಂಬ ಸಂಪ್ರದಾಯದಂತೆ ದೇವರ ಭಂಡಾರದ ಲೆಕ್ಕಾಚಾರ, ಸಭೆಯೊಂದಿಗೆ ಹಬ್ಬದ ಆಚರಣೆ ಕೊನೆಯಾಗುವದು.
ಹಿಂದೆ ನೆರೆಯ ಹಲವು ಊರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಹಬ್ಬ ಆಚರಿಸುತ್ತಿದ್ದು ಪುರಾತನ ಕಾಲದಲ್ಲಿ ಒಂದೊಂದು ಕುಟುಂಬದಿಂದ ಒಬ್ಬ ವ್ಯಕ್ತಿಯನ್ನು ದೇವರಿಗೆ ಬಲಿಕೊಡುತ್ತಿದ್ದರಂತೆ. ಹಿಂದೊಮ್ಮೆ ಊರಿಗೆ ಸಿಡುಬು ಬಂದಿತಂತೆ ಆ ಸಮಯದಲ್ಲಿ ಊರನ್ನು ಕಾಪಾಡೆಂದು ಊರವರು ದೇವರಿಗೆ ಭದ್ರಕಾಳಿಗೆ ಹರಕೆ ಹೊತ್ತ ಫಲವಾಗಿ ಸಿಡುಬು ಮಾಯವಾದ ಬಗ್ಗೆ ಹಿರಿಯರು ಹೇಳುತ್ತಾರೆ. ಅದೇ ರೀತಿ ಊರಿನವರು ಪುರಾತನ ದೇವಾಲಯದ ಸಂಪ್ರದಾಯವನ್ನು ಶ್ರದ್ದಾಭಕ್ತಿಯಿಂದ ಆಚರಿಸುತ್ತಾ ತಮ್ಮ ತಮ್ಮ ಹರಕೆಯನ್ನು ದೇವರಿಗೆ ಅರ್ಪಿಸುವರು.
-ಪುತ್ತರಿರ ಕರುಣ್ ಕಾಳಯ್ಯ , ಪಪ್ಪುತಿಮ್ಮಯ್ಯ.