ಮಡಿಕೇರಿ, ಏ.23 : ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ (ಲಿವಿಂಗ್ ಎಂಟಿಟಿ ವಿದ್ ಲೀಗಲ್ ಪರ್ಸನ್ ಸ್ಟೇಟಸ್) ಕ್ಕಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ವಾಹನ ಜಾಥಾ ಮೇ 24ರಂದು ತಲಕಾವೇರಿಯಿಂದ ಆರಂಭವಾಗಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಎಲ್ಲಾ ನಾಗರಿಕತೆ ಮತ್ತು ಸಂಸ್ಕøತಿಗೆ ನದಿಗಳೇ ಮೂಲವಾಗಿದ್ದು, ಕಾವೇರಿ ನದಿ ಮಹರ್ಷಿ ಅಗಸ್ತ್ಯರನ್ನು ವಿಶ್ವ ದಾರ್ಶನಿಕರನ್ನಾಗಿಸಿತು. ಕ್ರೋಢ ದೇಶ (ಕೊಡಗು ದೇಶ)ವನ್ನು ಜನಪದವನ್ನಾಗಿಸಿತು. ಆ ಮೂಲಕ ವಿಶ್ವದ ನಾಗರಿಕತೆ ಉಗಮಕ್ಕೆ ದಾರಿಯಾಗುವದರ ಮೂಲಕ ಕೊಡವ ಬುಡಕಟ್ಟು ಕ್ಷಾತ್ರಕುಲದ ಉತ್ಪತ್ತಿಗೆ ನಾಂದಿಯಾಯಿತು. ಸೃಷ್ಟಿ, ನೀರು ಜೀವನಕ್ಕೆ ಅವಿನಾಭಾವ ನಂಟಿದ್ದು, ಇಂದು ಅಂತಹ ಪುಣ್ಯನದಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದು, ಅದನ್ನು ಸಂರಕ್ಷಿಸ ಬೇಕಾದರೆ ಅಸಾಧಾರಣವಾದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪ್ರತಿಪಾದಿಸಿದರು.
ಕಾವೇರಿ ನದಿ ವೇದ ಕಾಲದ ಏಳು ಪವಿತ್ರ ಜೀವನದಿಗಳಲ್ಲಿ ಒಂದಾಗಿದ್ದು, ವೇದ ಕಾಲದ ಸಪ್ತ ನದಿಗಳ ಕುರಿತಾಗಿರುವ ಸಂಸ್ಕøತ ಶ್ಲೋಕದಲ್ಲಿ ಇದನ್ನು ಪ್ರಸ್ತಾಪಿಸಲಾಗಿದೆ. ಭಾರತದಲ್ಲೂ ಹಿಂದೂ ದೇವತೆಗಳಿಗೆ ನೀಡಿರುವ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನವನ್ನು ಗಂಗಾ, ಯಮುನಾ ನದಿಗಳಿಗೆ ಉತ್ತರಾಖಂಡ ಸರಕಾರ ಹಾಗೂ ನರ್ಮದೆಗೆ ಮಧ್ಯಪ್ರದೇಶ ಸರಕಾರಗಳು ನೀಡಿದ್ದು, ಅದೇ ಮಾದರಿಯಲ್ಲಿ ಕಾವೇರಿ ನದಿಗೂ ಅಂತಹ ಶಾಸನಬದ್ಧ ಸ್ಥಾನಮಾನ ನೀಡಬೇಕು ಎಂದು ನಾಚಪ್ಪ ಆಗ್ರಹಿಸಿದರು.
ಭಾರತೀಯರಿಗೆ ನದಿಗಳು ಕೇವಲ ನದಿಗಳಲ್ಲ. ಅವು ಅವರ ಮನೋಭೂಮಿಕೆಯಲ್ಲಿ ಮನುಷ್ಯ ರೂಪದಲ್ಲಿ ಸಾಕಾರಗೊಳ್ಳುವ ದೇವತೆಗಳಾಗಿದ್ದು, ಭಾರತೀಯ ನ್ಯಾಯ ಶಾಸ್ತ್ರದ ಪ್ರಕಾರ ಹಿಂದೂ ದೇವತೆಗಳು ‘ಲೀಗಲ್ ಪರ್ಸನಲ್’ ಗಳಾಗಿವೆ. ಲೀಗಲ್ ಪರ್ಸನ್ ಅಂದರೆ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿರುವ ವ್ಯಕ್ತಿ ಎಂದರ್ಥ ವಾಗಿದ್ದು, ಅದರಂತೆ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ದೊರೆತಲ್ಲಿ ಕೊಡಗಿಗೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದರು.
ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು 2017ರ ಮಾರ್ಚ್ನಲ್ಲೇ ಸಂಘಟನೆ ವಿಶ್ವಸಂಸ್ಥೆಯ ನದಿ ನೀರು ಹಂಚಿಕೆ ನ್ಯಾಯಮಂಡಳಿಯಿಂದ ಹಿಡಿದು ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಗೃಹಸಚಿವರು ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಜ್ಞಾಪನಾಪತ್ರ ರವಾನಿಸಿದ್ದು, ಇದೀಗ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯಿಂದ ಸಮುದ್ರ ಸೇರುವ ಪೂಂಪ್ಹಾರ್ವರೆಗೆ ವಾಹನ ಜಾಥಾ ಆಯೋಜಿಸಲಾಗಿದೆ ಎಂದು ನಾಚಪ್ಪ ಮಾಹಿತಿ ನೀಡಿದರು.
ಪ್ರತಿದಿನ 200ಕಿ.ಮೀ ಜಾಥಾ
ಮೇ 24ರಂದು ತಲಕಾವೇರಿ ಯಲ್ಲಿ ಆರಂಭವಾಗಲಿರುವ ಜಾಥಾ ಜಲಾನಯನ ಪ್ರದೇಶದ ಜಿಲ್ಲೆಗಳಾದ ಕೊಡಗು, ಮೈಸೂರು, ಮಂಡ್ಯ, ಧರ್ಮಪುರಿ, ಸೇಲಂ, ಈರೋಡ್, ತಿರುಚರಾಪಳ್ಳಿ, ತಂಜಾವೂರು, ಶ್ರೀರಂಗಂ ಮೂಲಕ ಹಾದು ಅಂತಿಮ ವಾಗಿ ಕಾವೇರಿ ಮತ್ತು ಬಂಗಾಳಕೊಲ್ಲಿ ಸಂಗಮಿಸುವ ಪೂಂಪುಹಾರ್ನಲ್ಲಿ ಸಮಾರೋಪಗೊಳ್ಳಲಿದೆ. ಕಾವೇರಿ ನದಿ ಹರಿಯುವ ಜಿಲ್ಲೆಗಳಲ್ಲಿ ಪ್ರತಿನಿತ್ಯ 200ಕಿ.ಮೀ ಜಾಥಾ ಸಂಚರಿಸಲಿದ್ದು, ಅಲ್ಲಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವ ಮೂಲಕ ಹಾಗೂ ಪುರಾತನ ದೇವಾಲಯಗಳಲ್ಲಿ ತಂಗುವ ಮೂಲಕ ಕಾವೇರಿ ಜಲಾನಯನ ಪ್ರದೇಶದ ಜನರಲ್ಲಿ ಧರ್ಮಪ್ರಜ್ಞೆ ಜಾಗೃತಿಗೊಳಿಸುವದ ರೊಂದಿಗೆ ಕಾವೇರಿಯ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡಲಾಗುವದು ಎಂದರು.
ಕಾವೇರಿ ಹೆಸರಿನಲ್ಲಿ ದಂಧೆ
ಇತ್ತೀಚಿನ ವರ್ಷಗಳಲ್ಲಿ ಕಾವೇರಿ ಸಂರಕ್ಷಣೆಯ ಹೆಸರಿನಲ್ಲಿ ಕೆಲವು ಎನ್ಜಿಒಗಳೂ ಸೇರಿದಂತೆ ಹಲವರು ವಿವಿಧ ರೀತಿಯ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ನಾಚಪ್ಪ ಆರೋಪಿಸಿದರು. ಆದರೆ ಸಿಎನ್ಸಿ ಸಂಘಟನೆಯ ಈ ಜಾಥಾ ಕಾವೇರಿಗೆ ಶಾಸನಬದ್ಧ ಸ್ಥಾನಮಾನ ಕೊಡಿಸುವದರೊಂದಿಗೆ ಅದರ ಸಂರಕ್ಷಣೆಗೆ ಕಾನೂನಿನ ಅಡಿಯಲ್ಲೇ ನಡೆಸುವ ಹೋರಾಟವಾಗಿದೆ ಎಂದು ಹೇಳಿದರು.
ಕುಶಾಲನಗರ ದಾಟಿದ ಬಳಿಕ ಬಯಲು ಸೀಮೆ ಪ್ರದೇಶದಲ್ಲಿ ಅಲ್ಲಿನ ಹವಾಮಾನಕ್ಕನುಗುಣವಾಗಿ ಬೆಳೆಯುವ ಗಿಡಗಳನ್ನು ನೆಟ್ಟು ಬೆಳೆಸಲು ಮುಂದಾದಲ್ಲಿ ಕಾವೇರಿಯಲ್ಲಿ ನೀರು ಬತ್ತದಂತೆ ತಡೆಯಬಹುದಾಗಿದೆ ಎಂದು ನಾಚಪ್ಪ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಮೂಕೊಂಡ ದಿಲೀಪ್, ಚಂಬಾಂಡ ಜನತ್, ಅರೆಯಡ ಗಿರೀಶ್ ಹಾಗೂ ಮಂದಪಂಡ ಮನೋಜ್ ಉಪಸ್ಥಿತರಿದ್ದರು.