ಮಡಿಕೇರಿ, ಏ. 23: ಜಾತ್ಯತೀತ ಜನತಾದಳದ ಅಧಿಕೃತ ಅಭ್ಯರ್ಥಿ ಯಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಮಾಜಿ ಸಚಿವ ಬಿ.ಎ. ಜೀವಿಜಯ ಅವರು, ಇಂದು ಬೆಳಿಗ್ಗೆ 11.45ಕ್ಕೆ ಇಲ್ಲಿನ ಚುನಾವಣಾಧಿಕಾರಿ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಗಾಂಧಿ ಮೈದಾನದಲ್ಲಿ ಜೆಡಿಎಸ್ ಪ್ರಮುಖರು ಹಾಗೂ ತಮ್ಮ ಬೆಂಬಲಿಗರೊಂದಿಗೆ ಆ ಮುನ್ನ ಸಮಾಲೋಚನೆ ನಡೆಸಿದ ಬಳಿಕ, ಚುನಾವಣಾ ಅಭ್ಯರ್ಥಿ ಸಹಿತ ಪಕ್ಷದ ಪ್ರಮುಖರಾದ ಕೆ.ಟಿ. ಪರಮೇಶ, ಸಂಜಯ್ ಜೀವಿಜಯ, ಎಸ್.ಎನ್. ರಾಜಾರಾವ್ ಹಾಗೂ ಎಸ್.ಎಂ. ಡಿಸಿಲ್ವಾ ಅವರೊಡಗೂಡಿ ಬಂದು ಚುನಾವಣಾಧಿಕಾರಿ ರಮೇಶ್ ಕೋನಾರೆಡ್ಡಿ ಅವರಿಗೆ ಮೂರು ಪ್ರತಿಗಳಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಲ್ಕು ತಿಂಗಳ ಹಿಂದೆಯಷ್ಟೇ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವಾಗೌಡ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರುಗಳು ತಮ್ಮನ್ನು ಅಭ್ಯರ್ಥಿ ಯನ್ನಾಗಿ ಘೋಷಿಸಿದ್ದು, ಗ್ರಾಮ ಮಟ್ಟದಲ್ಲೂ (ಮೊದಲ ಪುಟದಿಂದ) ಪಕ್ಷ ಸಂಘಟನೆಯೊಂದಿಗೆ ಚುನಾವಣಾ ತಯಾರಿ ನಡೆಸಿರುವದಾಗಿ ನುಡಿದರು.

ಎಲ್ಲರೂ ಗೆಲುವಿಗೆ ಸ್ಪರ್ಧೆ: ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಸಹಿತ ಪಕ್ಷೇತರರಾಗಿ ಸ್ಪರ್ಧಿಸುವವರು ಕೂಡ ಗೆಲುವಿಗಾಗಿ ನಾಮಪತ್ರ ಸಲ್ಲಿಸಿದ್ದು, ಇಂತಹವರೇ ಪ್ರತಿಸ್ಪರ್ಧಿ ಎಂದು ಬಯಸುವದು ಮೂರ್ಖತನವಾದೀತು ಎಂದು ಜೀವಿಜಯ ಅಭಿಪ್ರಾಯಪಟ್ಟರು.

ಸಾಮರಸ್ಯ ನೆಲೆಸಬೇಕು: ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ಕೋಮುದ್ವೇಷ ರಾಜಕಾರಣದಿಂದ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದ್ದನ್ನು ಜೆಡಿಎಸ್ ಜಾತ್ಯತೀತ ನಿಲುವಿನೊಂದಿಗೆ ಎಲ್ಲವನ್ನು ತೊಡೆದು ಹಾಕಿ, ಎಲ್ಲರಲ್ಲೂ ಸಾಮರಸ್ಯ ನೆಲೆಸಲು ಶ್ರಮಿಸುವದಾಗಿ ನುಡಿದರು. ಹೀಗಾಗಿ ಈ ಬಾರಿಗೆ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು, ನೂರಕ್ಕೆ ನೂರರಷ್ಟು ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸಮರ್ಥಿಸಿದರು.

ಜಿಲ್ಲೆಯಲ್ಲಿ ಕೂಡ ತಾವು ಹಾಗೂ ಸಂಕೇತ್ ಪೂವಯ್ಯ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ತಮ್ಮ ಗೆಲುವಿನೊಂದಿಗೆ ಜಿಲ್ಲೆಗೆ ಸರಕಾರದಲ್ಲಿ ಉತ್ತಮ ಸ್ಥಾನ ಕಲ್ಪಿಸುವ ಭರವಸೆ ಯನ್ನು ವರಿಷ್ಠರು ನೀಡಿದ್ದಾಗಿಯೂ ನುಡಿದರಲ್ಲದೆ, ಜನತೆ ಆಶೀರ್ವದಿಸಲಿ ದ್ದಾರೆ ಎಂದು ಪ್ರತಿಯಾಡಿದರು.

‘ಶಕ್ತಿ’ಯೊಂದಿಗೆ ಮುಕ್ತನುಡಿ

ನಾಮಪತ್ರ ಸಲ್ಲಿಸುವ ಮುನ್ನ ಗಾಂಧಿ ಮೈದಾನದಲ್ಲಿ ಬೆಂಬಲಿಗರ ನಡುವೆ ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ತಾವು ಶಾಸಕರಾಗಿ ಗೆದ್ದು ಬರುವದರೊಂದಿಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಆಡಳಿತಾತ್ಮಕ ಅನುಭವದೊಂದಿಗೆ, ಕೊಡಗಿನ ಜನತೆಯ ನೋವು ನಲಿವು ಅರಿತುಕೊಂಡಿರುವೆ ಎಂದ ಅವರು, ಗ್ರಾಮೀಣ ರಸ್ತೆ, ವಿದ್ಯುತ್, ಕುಡಿಯುವ ನೀರಿನಂತಹ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಆದ್ಯತೆಯ ಮೇರೆ ಗಮನ ಕೊಡುವದಾಗಿ ನುಡಿದರು. ಕೊಡಗು ಜಿಲ್ಲೆಯ ಜಮ್ಮಾ ಸಮಸ್ಯೆ, ರೈತರ ಬವಣೆಯೊಂದಿಗೆ ಕಾಫಿ ಬೆಳೆಗಾರರ ತೊಂದರೆ ನಿವಾರಿಸಲು ತಾವು ಜಾತ್ಯತೀತ ಬದ್ಧತೆಯಿಂದ ಶ್ರಮಿಸುವದಾಗಿ ಪುನರುಚ್ಚರಿಸಿದರಲ್ಲದೆ, ಕಾರ್ಯ ಕರ್ತರು ಮತ್ತು ಮತದಾರರು ಆಶೀರ್ವದಿಸಿ ಬದಲಾವಣೆ ತರುವಲ್ಲಿ ಕೈ ಜೋಡಿಸುವಂತೆಯೂ ಜೀವಿಜಯ ಕರೆ ನೀಡಿದರು.

ಎಲ್ಲೆಡೆ ಬೆಂಬಲ: ಈಗಾಗಲೇ ಚುನಾವಣಾ ಅಖಾಡದಲ್ಲಿ ಕಾರ್ಯ ಪ್ರವೃತ್ತರಾಗಿರುವ ತಮಗೆ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲೂ ಮತದಾರರ ಬೆಂಬಲ ಲಭಿಸಿದ್ದು, ಗೆಲುವಿಗೆ ಉತ್ತಮ ವಾತಾವರಣ ಏರ್ಪಾಡಾಗಿರುವದಾಗಿ ವಿಶ್ವಾಸದಿಂದ ನುಡಿದರು. ಹಾಗೆಯೇ ಜನತೆ ಮತ್ತು ಕಾರ್ಯಕರ್ತರ ವಿಶ್ವಾಸಕ್ಕೆ ನಿರಾಸೆ ಮೂಡಿಸದೆ ಒಳ್ಳೆಯ ರೀತಿಯಲ್ಲಿ ಜನಪರ ಕಾಳಜಿಯಿಂದ ತಾವು ಶ್ರಮಿಸುವದಾಗಿ ಆಶಾಭಾವನೆ ವ್ಯಕ್ತಪಡಿಸಿದರು.