ಮಡಿಕೇರಿ, ಏ. 23: ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಪಂಡ ಎಂ. ಮುತ್ತಪ್ಪ ಇಂದು ಅಧಿಕೃತವಾಗಿ ಬಂಡಾಯ ಬಾವುಟ ಹಾರಿಸುವದರೊಂದಿಗೆ, ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇಲ್ಲಿನ ಅವರ ಕಚೇರಿಯಿಂದ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಪ್ರದರ್ಶನ ಮಾಡಿದ ಮುತ್ತಪ್ಪ, ಕಾಂಗ್ರೆಸ್ ವರಿಷ್ಠರ ವಿರುದ್ಧ ಅಸಮಾಧಾನದೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಿದರು.

ಮಧ್ಯಾಹ್ನದ ಸುಮಾರಿಗೆ ಅಪಾರ ಬೆಂಬಲಿಗರ ಯುವಪಡೆಯೊಂದಿಗೆ ಚುನಾವಣಾ ಕಚೇರಿಯತ್ತ ಮೆರವಣಿಗೆಯಲ್ಲಿ ಆಗಮಿಸಿದ ಅವರು, ಪ್ರವೇಶ ದ್ವಾರದಲ್ಲಿ ಪೊಲೀಸರು ತಡೆಯೊಡ್ಡಿದರಿಂದ ತಾವು ತಮ್ಮ ನಾಲ್ವರು ಬೆಂಬಲಿಗ ರೊಂದಿಗೆ ಧಾವಿಸಿ ಚುನಾವಣಾಧಿ ಕಾರಿ ರಮೇಶ್ ಕೋನಾರೆಡ್ಡಿ ಅವರಿಗೆ ದ್ವಿಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಬೆಂಬಲಿಗರಾದ ಪವನ್ ಪೆಮ್ಮಯ್ಯ, ಅಜ್ಜಳ್ಳಿ ರವಿ, ಟಿ.ಪಿ. ಹಮೀದ್, ಕಿಶೋರ್ ಅವರುಗಳಿದ್ದು, ಪಕ್ಷೇತರ ಅಭ್ಯರ್ಥಿ ಹಾಗೂ ಬಂಡಾಯ ಕಾಂಗ್ರೆಸ್ಸಿಗನಾಗಿ ಉಮೇದುವಾರಿಕೆ ಸಲ್ಲಿಸುತ್ತಿರುವದಾಗಿ ಪ್ರಕಟಿಸಿದರು.ಮಾತು ತಪ್ಪಿದರು: ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಪಕ್ಷದ (ಮೊದಲ ಪುಟದಿಂದ) ವರಿಷ್ಠರು ಕೊನೆಯ ಘಳಿಗೆ ತನಕ ತಮಗೆ ಟಿಕೆಟ್‍ನೊಂದಿಗೆ ಬಿ. ಫಾರಂ ನೀಡುವದಾಗಿ ನಂಬಿಸಿ ಬಳಿಕ ಮಾತು ತಪ್ಪಿದರು ಎಂದು ಈ ವೇಳೆ ಮುತ್ತಪ್ಪ ಮಾಧ್ಯಮದೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಆಮಿಷ : ಈಗಾಗಲೇ ಚುನಾವಣಾ ತಯಾರಿ ಮಾಡಿಕೊಂಡಿದ್ದ ತಮಗೆ ವಂಚಿಸಿ ಬಳಿಕ ಬೇರೆಯವರಿಗೆ ಬಿ. ಫಾರಂ ನೀಡಿದ್ದು, ಪಕ್ಷ ಸ್ಪರ್ಧಿಸಲು ಅವಕಾಶ ನೀಡಿರುವ ಅಭ್ಯರ್ಥಿ ದುರ್ಬಲರಾಗಿರುವದರಿಂದ ತಾವು ಬಂಡಾಯ ಸ್ಪರ್ಧೆ ಮಾಡುವ ಮೂಲಕ ಗೆಲುವು ಸಾಧಿಸುವದಾಗಿ ವಿಶ್ವಾಸದ ನುಡಿಯಾಡಿದರು.

ಟಿಕೆಟ್ ಬದಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ, ರಾಜ್ಯ ಪದಾಧಿಕಾರಿ ಇತ್ಯಾದಿ ಆಮಿಷವೊಡ್ಡಿದ್ದು, ತಾವು ಅದಕ್ಕೆಲ್ಲ ಮಣಿಯದೆ ಕಣಕ್ಕಿಳಿದಿರುವದಾಗಿ ಸ್ಪಷ್ಟ ಪಡಿಸಿದರು. ಯಾವ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲಾರೆ ಎಂದ ಮುತ್ತಪ್ಪ ಮುಂದಿನ ಬೆಳವಣಿಗೆಯನ್ನು ಕಾದು ನೋಡಿ ಎಂದು ಮಾಧ್ಯಮ ಮಂದಿಗೆ ಪ್ರತಿನುಡಿಯಾಡಿದರು.

ಯಡೂರಪ್ಪ ಕಣಕ್ಕೆ : ಪಿರಿಯಾಪಟ್ಟಣ ಪಟ್ಟಣ ನಿವಾಸಿ, ಕೃಷಿಕ ಪಿ.ಎಸ್. ಯಡೂರಪ್ಪ (65) ಎಂಬವರು ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಇಂದು ತಮ್ಮ ಉಮೇದುವಾರಿಕೆ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದರು. ಇಲ್ಲಿನ ಚುನಾವಣಾಧಿಕಾರಿ ಕಚೇರಿಗೆ ತನ್ನ ಸ್ನೇಹಿತ ರಂಗೇಗೌಡ ಎಂಬವ ರೊಂದಿಗೆ ಬಂದ ಯಡೂರಪ್ಪ ಉಮೇದುವಾರಿಕೆ ಸಲ್ಲಿಸಿದ ವೇಳೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿ, ಗೆಲ್ಲುವ ವಿಶ್ವಾಸದಿಂದ ಸ್ಪರ್ಧಿಸಿರುವ ದಾಗಿ ನುಡಿದರು. ನಿವೃತ್ತ ಕಂದಾಯ ನೌಕರರಾಗಿದ್ದು, ಸಣ್ಣ ಪ್ರಮಾಣದ ಕೃಷಿಕ ತಾನೆಂದು ಹೇಳಿಕೊಂಡ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಡಿಕೇರಿಯಿಂದ ಸ್ಪರ್ಧಿಸಲು ಆಸಕ್ತಿ ಹೊಂದಿರುವದಾಗಿ ಸಮರ್ಥಿಸಿ ಕೊಂಡರು.

ಬಿ.ಎಂ. ತಿಮ್ಮಯ್ಯ ಸ್ಪರ್ಧೆ: 2008ರಲ್ಲಿ ಚುನಾವಣಾ ಕಣದಲ್ಲಿ ಕಾಣಿಸಿಕೊಂಡಿದ್ದ ಮೂರ್ನಾಡುವಿನ ಕೃಷಿಕ ಬಿ.ಎಂ. ತಿಮ್ಮಯ್ಯ ಈ ಬಾರಿ ಮತ್ತೆ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಯುವದ ರೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಆ ಬಳಿಕ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿ, ಹಿಂದಿನ ಅನುಭವದೊಂದಿಗೆ ಮತ್ತೆ ಸ್ಪರ್ಧೆ ಬಯಸಿದ್ದು, ಮತದಾರರನ್ನು ತಲಪಲು ಪ್ರಯತ್ನ ಮಾಡಲಿರುವದಾಗಿ ನುಡಿದರು.