ಸೋಮವಾರಪೇಟೆ, ಏ. 23: ಮದ್ಯ ಸೇವಿಸಿದ ಹಣವನ್ನು ಕೇಳಿದ ಕಾರಣಕ್ಕಾಗಿ ನಾಲ್ವರ ಗುಂಪು ಬಾರ್ನ ಕ್ಯಾಷಿಯರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಇಂದು ನಡೆದಿದ್ದು, ನಾಲ್ವರ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಇಲ್ಲಿನ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ಬಾರ್ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿರುವ ಶರತ್ ಎಂಬವರ ಮೇಲೆ ಕಲ್ಕಂದೂರು ಗ್ರಾಮದ ಡೀಲಾಕ್ಷ, ಪ್ರಸನ್ನ, ನಿಖಿಲ್, ಗಾಂಧಿ ಅವರುಗಳು ಹಲ್ಲೆ ನಡೆಸಿದ್ದು, ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ಪೊಲೀಸರಿಗೆ ದೂರು ನೀಡಿದ್ದಾರೆ.
ನಾಲ್ವರು ಆರೋಪಿಗಳು ನಿನ್ನೆ ರಾತ್ರಿ ಮದ್ಯ ಸೇವಿಸಲು ಬಾರ್ಗೆ ಬಂದಿದ್ದ ಸಂದರ್ಭ ಹಳೆಯ ಬಾಕಿ 2 ಸಾವಿರ ರೂಪಾಯಿಗಳನ್ನು ನೀಡುವಂತೆ ಕ್ಯಾಷಿಯರ್ ಶರತ್ ಕೇಳಿದ್ದಾರೆ ಎನ್ನಲಾಗಿದ್ದು, ಇದೇ ವಿಚಾರಕ್ಕೆ ನಿನ್ನೆ ಜಗಳ ತೆಗೆದು ಪೊಲೀಸರು ಆಗಮಿಸಿದ ಸಂದರ್ಭ ಓಡಿಹೋಗಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ಬಾರ್ಗೆ ಆಗಮಿಸಿದ ನಾಲ್ವರು, ಮತ್ತೆ ಜಗಳ ತೆಗೆದು ಶರತ್ನ ಮುಖ ಸೇರಿದಂತೆ ಇತರ ಭಾಗಗಳಿಗೆ ಹಲ್ಲೆ ನಡೆಸಿದ್ದಲ್ಲದೇ, ಬಾರ್ನಲ್ಲಿ ಕೆಲಸ ಮಾಡುವ ಚಂದ್ರ ಎಂಬವರಿಗೂ ಕೊಲೆ ಬೆದರಿಕೆ ಒಡ್ಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.