ಗುಡ್ಡೆಹೊಸೂರು, ಏ. 23: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ 4ನೇ ದಿನದ ವಿವಿಧ ಪೂಜಾ ಕಾರ್ಯಕ್ರಮ ಮುಗಿಸಿ ಮುಂಜಾನೆ 3 ಗಂಟೆಗೆ ಗರ್ಭಗುಡಿಯಲ್ಲಿ ಶಿವಲಿಂಗ ಪ್ರತಿಷ್ಠಾಪಿಸಲಾಯಿತು.

ಈ ಶಿಲಾ ಶಿವಲಿಂಗವು ದೇವಸ್ಥಾನದ ಪಕ್ಕದಲ್ಲಿ ಅತೀ ಪುರಾತನ ಕಾಲದಲ್ಲಿ ಪೂಜಿಸಿ ಕೊಂಡು ಬರುತ್ತಿದ್ದ ಶಿವಲಿಂಗ ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿತ್ತು. ಅದರಂತೆ ಸುಮಾರು 5 ಅಡಿ ಉದ್ದದ ಶಿವಲಿಂಗವನ್ನು ಮಣ್ಣಿನಡಿಯಿಂದ ತೆಗೆದು ಮೂಲಸ್ಥಾನದಿಂದ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸ ಲಾಯಿತು. 5 ದಿನಗಳ ಕಾರ್ಯಕ್ರಮದ ಅಂಗವಾಗಿ ತಾ. 20 ರಂದು ಮುಂಜಾನೆ ಬಲಿಪೂಜೆ, ಉತ್ಸವಬಲಿ, ಮಹಾಪೂಜೆ, 3 ಗಂಟೆಗೆ ಶ್ರೀ ದೇವರ ಬಲಿ ಹಾರಂಗಿ ನದಿಯಲ್ಲಿ ಗಂಗಾ ಪೂಜೆ, ದರ್ಶನ ಬಲಿ ಹಾಗೂ ವಿವಿಧ ಪೂಜೆ, ಹಾರಂಗಿ ನದಿಯಲ್ಲಿ ಗಂಗಾಪೂಜೆ, ನಂತರ ದೇವರ ಉತ್ಸವ ಮೆರವಣಿಗೆ ನಡೆಯಿತು. ಈ 5 ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದ್ದಾರೆ. ಪೂಜಾ ಕಾರ್ಯಕ್ರಮದಲ್ಲಿ ಕಲ್ಲಾರು ಬಾಲಕೃಷ್ಣ ಗುರೂಜಿ ಮತ್ತು ವಾಸ್ತು ಶಿಲ್ಪಿ ರಮೇಶ್ ಕಾರಂತ್ ಭಾಗವಹಿಸಿದ್ದರು.