ಮಡಿಕೇರಿ, ಏ. 23: ಕುಗ್ರಾಮವೆಂದೇ ಪರಿಗಣಿಸಲ್ಪಟ್ಟಿರುವ ಸೂರ್ಲಬ್ಬಿ, ಕುಂಬಾರಗಡಿಗೆ, ಕಿಕ್ಕರಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಪಡಿತರ ವಿತರಣೆಯನ್ನು ಸ್ಥಗಿತಗೊಳಿಸಿರುವ ಬಗ್ಗೆ ಅಸಮಾಧಾನಗೊಂಡಿರುವ ಗ್ರಾಮಸ್ಥರು, ಕೂಡಲೇ ಪಡಿತರ ವಿತರಿಸದಿದ್ದಲ್ಲಿ ಪ್ರತಿಭಟಿಸುವದಾಗಿ ಎಚ್ಚರಿಸಿ ಜಿಲ್ಲಾಧಿಕಾರಿಗಳು ಹಾಗೂ ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಸೋಮವಾರಪೇಟೆ ತಾಲೂಕಿಗೆ ಒಳಪಡುವ ಈ ಗ್ರಾಮ ವ್ಯಾಪ್ತಿಗೆ ಏಪ್ರಿಲ್ ತಿಂಗಳ ಪಡಿತರವನ್ನು ಇದುವರೆಗೆ ವಿತರಿಸಿಲ್ಲ. ಅಲ್ಲದೆ, ವಿತರಣೆ ಮಾಡುವ ಪಡಿತರಕ್ಕೆ ರೂ. 10 ರಂತೆ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಪಡಿತರ ವಿತರಿಸದಿರುವ ಬಗ್ಗೆ ಪ್ರಶ್ನಿಸಿದರೆ, ವಾಹನದ ಎಫ್.ಸಿ. ಆಗಿಲ್ಲವೆಂಬ ಸಬೂಬು ಹೇಳುತ್ತಿದ್ದಾರೆ. ತಾ. 28ರ ಒಳಗಾಗಿ ವಿತರಣೆ ಮಾಡದಿದ್ದಲ್ಲಿ ತಾ. 30 ರಂದು ಸೋಮವಾರಪೇಟೆಯಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸುವದಾಗಿ ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.