ಮಡಿಕೇರಿ, ಏ. 24: ಒಂದು ತಿಂಗಳ ಹಿಂದೆ ಪೊನ್ನಂಪೇಟೆಯಲ್ಲಿ ನಡೆದಿದ್ದ ಅಪ್ರಾಪ್ತೆ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿ ಗಳನ್ನು ಪೊನ್ನಂಪೇಟೆ ಪೊಲೀಸರು ಇಂದು ಫೋಕ್ಸೊ ಕಾಯ್ದೆಯಡಿ ವಶಕ್ಕೆ ಪಡೆದಿದ್ದಾರೆ.ಘಟನೆ ನಡೆದು ತಿಂಗಳು ಕಳೆದಿದ್ದರೂ ಪ್ರಕರಣ ಸದ್ದಿಲ್ಲದೆ ಮುಚ್ಚಿ ಹೋಗಿತ್ತು. ಗ್ರಾಮದಲ್ಲಿ ಈ ಬಗ್ಗೆ ಸುದ್ದಿ ಹರಡಿತ್ತಾದರೂ ಸ್ಫೋಟ ಗೊಂಡಿರಲಿಲ್ಲ. ಎರಡು ದಿನಗಳ ಹಿಂದೆ ತಮಗೆ ದೊರೆತ ಅನಾಮಧೇಯ ಪತ್ರವೊಂದರ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಚೈಲ್ಡ್‍ಲೈನ್ ವಿಭಾಗಕ್ಕೆ ಸೂಚನೆ ನೀಡಿದ್ದರು. ಚೈಲ್ಡ್‍ಲೈನ್‍ನವರು ಪೊನ್ನಂಪೇಟೆಗೆ ತೆರಳಿ ಬಾಲಕಿಯನ್ನು ವಶಕ್ಕೆ ಪಡೆದು ಪೊನ್ನಂಪೇಟೆ ಪೊಲೀಸರಿಗೆ ಮಾಹಿತಿ ನೀಡಿ ಫೋಕ್ಸೊ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದರೂ ಪೊಲೀಸರಿಂದ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ.ಈ ಬಗ್ಗೆ ‘ಶಕ್ತಿ’ಯಲ್ಲಿ ಇಂದು ವರದಿ ಪ್ರಕಟಗೊಂಡ ಬೆನ್ನಲ್ಲೇ ಇಂದು ಪೊನ್ನಂಪೇಟೆ ಪೊಲೀಸರು ಆರೋಪಿಗಳಾದ ಪೊನ್ನಂಪೇಟೆ ಟೌನ್‍ಬ್ಯಾಂಕ್ ಉದ್ಯೋಗಿ ಮಂಜು (44) ಹಾಗೂ ಪೊನ್ನಂಪೇಟೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಬಾಲಕನನ್ನು ಫೋಕ್ಸೊ ಕಾಯ್ದೆಯಡಿ ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.ಘಟನೆ ಹಿನ್ನೆಲೆ: ಸಂತ್ರಸ್ತೆ ಬಾಲಕಿಯ ತಂದೆ ಹಾಗೂ ಆರೋಪಿ ಮಂಜು ಸ್ನೇಹಿತರೆನ್ನಲಾಗಿದ್ದು, ಬಾಲಕಿಯ ತಂದೆ ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಬಳಿಕ ಮಂಜು

(ಮೊದಲ ಪುಟದಿಂದ) ಆಗಿಂದಾಗ್ಗೆ ಬಾಲಕಿಯ ಮನೆಗೆ ಹೋಗಿ ಬರುತ್ತಿದ್ದ ಎಂದು ಹೇಳಲಾಗಿದ್ದು, ಸಹಕಾರ ಸಂಘವೊಂದರಲ್ಲಿ ಉದ್ಯೋಗದಲ್ಲಿದ್ದ ಬಾಲಕಿಯ ತಂದೆ ಸಾವನ್ನಪ್ಪಿದ ಬಳಿಕ ಆ ವೃತ್ತಿ ತಾಯಿಗೆ ಸಿಕ್ಕಿತ್ತು.

ಒಂದು ದಿನ ಮಂಜು, ಬಾಲಕಿ ಒಬ್ಬಳೇ ಮನೆಯಲ್ಲಿದ್ದಾಗ ಮನೆಗೆ ಹೋಗಿ ಬಂದುದ್ದನ್ನು ಕಂಡ ಗ್ರಾಮಸ್ಥರ ವಲಯದಲ್ಲಿ ಅಂತೆ ಕಂತೆಗಳು ಶುರುವಾಗಿದ್ದವು. ದಿನ ಕಳೆಯುತ್ತಿದ್ದಂತೆ ಬಾಲಕಿ ವರ್ತನೆಯಲ್ಲಿ ಬದಲಾವಣೆಗಳು ಕಂಡುಬರ ತೊಡಗಿತು. ಇದರಿಂದ ಸಂಶಯ ಗೊಂಡ ಆಕೆಯ ಚಿಕ್ಕಪ್ಪ ಹಾಗೂ ತಾಯಿ ವೀರಾಜಪೇಟೆ ಆಸ್ಪತ್ರೆಗೆ ಕರೆದೊಯ್ದ ವೇಳೆ ಆಕೆ ಅತ್ಯಾಚಾರ ಕ್ಕೊಳಗಾಗಿರುವದು ಪತ್ತೆಯಾಗಿದೆ. ನಂತರ ಅಪರಾಧಿಗಳು ಯಾರೆಂಬದನ್ನು ಪತ್ತೆ ಹಚ್ಚಲು ಮಹಿಳಾ ಸಂಘಟನೆಗಳು ಬಾಲಕಿಯನ್ನು ‘ಕೌನ್ಸಿಲಿಂಗ್’ಗೆ ಒಳಪಡಿಸಿದರೂ ಆಕೆ ಸತ್ಯಾಂಶ ಹೇಳುವದಿಲ್ಲ. ಈ ಹಿನ್ನೆಲೆಯಲ್ಲಿ ಕೊನೆಗೆ ದೇವರ ಮೊರೆ ಹೋದ ಕುಟುಂಬ ಬಾಳೆಲೆಯ ದೇವಿಯ ದೇವಸ್ಥಾನಕ್ಕೆ ತೆರಳಿದರು. ಅಲ್ಲಿ ಬಾಲಕಿಯ ಮೈಮೇಲೆ ಅವಾಹನೆಯಾಗಿ ಆಕೆ ತನ್ನ ಮೃತ ತಂದೆಯ ಧ್ವನಿಯಲ್ಲಿ ಮಾತನಾಡಿ ದಳೆನ್ನಲಾಗಿದ್ದು, ಮುಖ್ಯ ಆರೋಪಿಯ ಹೆಸರನ್ನು ಕೂಡ ಬಹಿರಂಗಪಡಿಸಿದ ಕುರಿತು ತಿಳಿದು ಬಂದಿದ್ದು, ಇದೊಂದು ವಿಸ್ಮಯಕಾರೀ ಘಟನೆ ಎನಿಸಿದೆ.

ಈ ನಡುವೆ ಅನಾಮಧೇಯ ಪತ್ರವೊಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಕೈ ಸೇರಿದ್ದು, ಅದರಲ್ಲಿ ಬಾಲಕಿಗೆ ಆದ ಅನ್ಯಾಯದ ಕುರಿತು ಮಾಹಿತಿ ನೀಡಲಾಗಿತ್ತು. ತಕ್ಷಣವೇ ಜಿಲ್ಲಾಧಿಕಾರಿಯವರು ಸ್ಪಂದಿಸಿ ಚೈಲ್ಡ್‍ಲೈನ್ ಫೌಂಡೇಶನ್‍ನ ಅಧಿಕಾರಿಗೆ ಸೂಕ್ತ ನಿರ್ದೇಶನ ನೀಡಿ ಪ್ರಕರಣದ ಕುರಿತು ತುರ್ತು ಕ್ರಮಕೈಗೊಳ್ಳುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ನಿನ್ನೆದಿನ ಅಧಿಕಾರಿ ಬಾಲಕಿಯನ್ನು ಕರೆತಂದು ಬಾಲಕಿಯರ ಬಾಲ ಮಂದಿರದಲ್ಲಿ ಸುರಕ್ಷತೆ ಯಲ್ಲಿರಿಸಿದ್ದು, ಇಂದು ಪೊನ್ನಂಪೇಟೆ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮೂಲವೊಂದರಿಂದ ‘ಶಕ್ತಿ’ಗೆ ತಿಳಿದು ಬಂದಂತೆ ಬಾಲಕ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಮುಖ್ಯ ಆರೋಪಿ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಈತನನ್ನು ಸಿಲುಕಿಸುವ ಯತ್ನದಲ್ಲಿ ಪೊಲೀಸರಿಗೆ ಹೇಳಿಕೆ ನೀಡಿರುವ ದಾಗಿ ಹೇಳಲಾಗಿದ್ದು, ಈ ಬಗ್ಗೆ ಸಮರ್ಪಕ ತನಿಖೆಯಿಂದಷ್ಟೆ ಸತ್ಯ ಹೊರಬರಬೇಕಾಗಿದೆ.