ಮಡಿಕೇರಿ, ಏ. 24 : ಜಿಲ್ಲೆಯ ವಿವಿಧೆಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ಸೋಮವಾರಪೇಟೆ, ಕುಶಾಲನಗರ, ಕೂಡಿಗೆ, ವೀರಾಜಪೇಟೆ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿದೆ. ಕುಶಾಲನಗರದಲ್ಲಿ ಸಂತೆ ದಿನವಾದ ಇಂದು ಭಾರೀ ಮಳೆಯಿಂದ ಸಂತೆ ನೀರಿನಲ್ಲಿ ಕೊಚ್ಚಿಹೋಗಿದೆ.ಕುಶಾಲನಗರ : ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಭಾರೀ ಪ್ರಮಾಣದ ಮಳೆಯಾಗಿದೆ. ಗಾಳಿ, ಗುಡುಗು ಸಿಡಿಲಿನ ಆರ್ಭಟದೊಂದಿಗೆ ಸುರಿದ ಮಳೆಗೆ ಜನಜೀವನ ಬಹುತೇಕ ಅಸ್ತವ್ಯಸ್ಥಗೊಂಡಿತ್ತು. ಸಂತೆ ದಿನವಾದ ಕಾರಣ ದಿಢೀರನೆ ಸುರಿದ ಕಾರಣ ವ್ಯಾಪಾರಸ್ಥರು ಹಾಗೂ ಗ್ರಾಹಕರು ಪರದಾಡುವಂತಾಯಿತು. ಅರ್ಧ ಗಂಟೆಗಳ ಕಾಲ ಸುರಿದ ಮಳೆಗೆ ಪಟ್ಟಣದ ಚರಂಡಿಗಳು ತುಂಬಿ ಹರಿಯುತ್ತಿದ್ದ ದೃಶ್ಯ ಕಂಡುಬಂತು. ವಾಹನ ಸಂಚಾರಕ್ಕೆ ಕೂಡ ಸ್ವಲ್ಪಕಾಲ ತೊಡಕುಂಟಾಯಿತು. ಯಾವದೇ ರೀತಿಯ ಅನಾಹುತ ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ.

ಸೋಮವಾರಪೇಟೆ :ನಿನ್ನೆ ಸಂಜೆ ಸೋಮವಾರಪೇಟೆ ವ್ಯಾಪ್ತಿಗೆ ಭಾರಿ ಮಳೆಯಾಗಿದ್ದು, ಹಲವೆಡೆಗಳಲ್ಲಿ ಮನೆ, ರಸ್ತೆಗೆ ಹಾನಿಯಾದ ಘಟನೆ ನಡೆದಿದೆ.

(ಮೊದಲ ಪುಟದಿಂದ) ಸಮೀಪದ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದ್ದು, ಕಿರಗಂದೂರು ಗ್ರಾಮ ಪಂಚಾಯಿತಿಯ ನೀರುಗಂಟಿ ಚಂದ್ರ ಎಂಬವರ ಮನೆ ಹಾಗೂ ಕೊಟ್ಟಿಗೆಯ ಮೇಲೆ ಮರ ಬಿದ್ದು ನಷ್ಟವಾಗಿದೆ.

ಇದರೊಂದಿಗೆ ದೇವರಾಜು ಎಂಬವರ ಮನೆಯ ಮೇಲ್ಛಾವಣಿ ಗಾಳಿಯ ರಭಸಕ್ಕೆ ಹಾರಿ ಹೋಗಿದ್ದು ಹಾನಿಯಾಗಿದೆ. ಗೋಪಾಲ್ ಎಂಬವರ ಮನೆ ಭಾಗಶಃ ಕುಸಿದಿದ್ದು, 25ಸಾವಿರ ರೂ ನಷ್ಟ ಸಂಭವಿಸಿದೆ.

ಸೋಮವಾರಪೇಟೆ ಕಸಬಾ ಹೋಬಳಿಗೆ ಹೆಚ್ಚು ಮಳೆಯಾಗಿದ್ದು, 13 ಮಿ.ಮೀ. ಮೀಟರ್ ಮಳೆ ದಾಖಲಾಗಿದೆ. ಶಾಂತಳ್ಳಿ ಹೋಬಳಿಗೆ 1 ಮಿ.ಮೀ. ಮೀಟರ್ ಮಳೆಯಾದ ಬಗ್ಗೆ ವರದಿಯಾಗಿದೆ.

ಗೋಣಿಕೊಪ್ಪ ವರದಿ : ವೀರಾಜಪೇಟೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಅಪರಾಹ್ನ ಮಳೆಯಾಗಿದೆ. ಕೆ.ಬಾಡಗ ವ್ಯಾಪ್ತಿಯ ನಾಣಚಿ, ಕೇಂಬುಕೊಲ್ಲಿ ಸುತ್ತಾಮುತ್ತ 55 ಸೆಂಟ್ಸ್ ಹಾಗೂ ಟಿ.ಶೆಟ್ಟಿಗೇರಿಯಲ್ಲಿ 10 ಸೆಂಟ್ ಮಳೆ ವರದಿಯಾಗಿದೆ. ಗೋಣಿಕೊಪ್ಪಲಿನಲ್ಲಿ ಜೋರಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಿದೆ. ಕೈಕೇರಿಯಲ್ಲಿ ಹಾಗೂ ಮಾಯಮುಡಿ ವ್ಯಾಪ್ತಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.

ವೀರಾಜಪೇಟೆ, ಪೊನ್ನಂಪೇಟೆ, ಕೋತೂರು, ಅಮ್ಮತ್ತಿ, ಹುದಿಕೇರಿ, ಕಾನೂರು, ಬಿರುನಾಣಿ ಭಾಗಗಳಲ್ಲಿ ಸಾಧಾರಣ ಮಳೆ ಹಾಗೂ ಪಾಲಿಬೆಟ್ಟದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.

ಕೂಡಿಗೆ : ಕೂಡಿಗೆ ವ್ಯಾಪ್ತಿಯ ಹುದುಗೂರು ಸೀಗೆಹೊಸೂರು, ಕೂಡುಮಂಗಳೂರು ವ್ಯಾಪ್ತಿಯಲ್ಲಿ ಗುಡುಗು ಮಿಂಚು ಗಾಳಿ ಸಹಿತ ಅಲ್ಲಿಕಲ್ಲು ಮಳೆಯಾಗಿದೆ. ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶದ ಸಮೀಪದಲ್ಲಿ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಎಂಟು ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಈ ವ್ಯಾಪ್ತಿಯಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಿದೆ.