ಚೆಟ್ಟಳ್ಳಿ, ಏ. 24: ಕೇರಳದ ಮಟ್ಟನೂರಿನ ಎಕ್ಸ್ಟ್ರೀಮ್ ಆಫ್ ರೋಡ್ ಚಾಲೇಂಜರ್ನಲ್ಲಿ ಕೊಡಗಿನ ವಿ5 ಆಫ್ರೋಡ್ಸ್ ತಂಡ ಮಿಂಚಿನ ಪ್ರದರ್ಶನದಿಂದ ಓವಲಾಲ್ ನಲ್ಲಿ ಮೊದಲ ಹಾಗು 6 ಹಂತದ ವೇಗದ ಪ್ರದರ್ಶನದಲ್ಲಿ 3 ಹಂತದಲ್ಲಿ ಉತ್ತಮ ಸಾಧನೆ ತೋರಿದ್ದಾರೆ.
ರಾತ್ರಿ ವೇಳೆ ಕಿರಿದಾದ ಬೆಟ್ಟಗುಡ್ಡಗಳ ನಡುವೆ ಏರ್ಪಡಿಸಿದ್ದ 2 ಹಂತದಲ್ಲಿ, ನಡೆದ ಬೆಟ್ಟಗುಡ್ಡ, ಕಲ್ಲುಬಂಡೆಗಳ ನಡುವೆ ಸಾಹಸದ ಆಫ್ ರೋಡ್ ರ್ಯಾಲಿಯಲ್ಲಿ ಕೊಡಗಿನಿಂದ ತೆರಳಿದ ವಿ5ಆಫ್ ರೋಡ್ಸ್ ತಂಡದ ಸದಸ್ಯರಾದ ಕೊಳತೊಡ್ ಬೈಗೋಡ್ನ ಮಾಳೇಟಿರ ಜಗತ್ನಂಜಪ್ಪ, ಅಮ್ಮತ್ತಿ ಕಾವಾಡಿಯ ಮಂಡೇಪಂಡ ಮಿಥುನ್ ಕಾರ್ಯಪ್ಪ ಹಾಗೂ ಉದ್ದಪಂಡ ಚೇತನ್ ಚಂಗಪ್ಪ, ಪಾಲಿಬೆಟ್ಟದ ಸಿಬಿಪೌಲ್ ಅವರ ಅತ್ಯುತ್ತಮ ಪ್ರದರ್ಶನದಿಂದ ಓವರಾಲ್ನಲ್ಲಿ ಮೊದಲ ಹಾಗೂ 6 ಹಂತಗಳ ವೇಗದ ಪ್ರದರ್ಶನದಲ್ಲಿ 3 ಹಂತದಲ್ಲಿ ಗೆಲುವನ್ನು ಸಾಧಿಸಿ ಸರ್ಟಿಫಿಕೇಟ್, ಟ್ರೋಫಿ ಹಾಗೂ ನಗದನ್ನು ತಮ್ಮದಾಗಿಸಿದ್ದಾರೆ. ರ್ಯಾಲಿಯಲ್ಲಿ ಜೀಪ್ನ್ನು ಚಾಲಿಸುವಾಗ ಉತ್ತಮ ಅನುಭವವಾಗಿದ್ದು ಕೆಲವೆಡೆ ಬಂಡೆ ಏರುವದು ಹಾಗೂ ಬೆಟ್ಟಗುಡ್ಡ ಹತ್ತಿ ಇಳಿಯುವಾಗ ರೋಚಕ ಅನುಭವ ನೀಡಿತೆಂದು ತಂಡದವರು ಹೇಳುತ್ತಾರೆ. ಕೊಡಗಿನ ವಿ5ಆಫ್ ರೋಡ್ಸ್ ತಂಡ ಗೋವಾದಲ್ಲಿ ನಡೆದ ಮಹೇಂದ್ರ ಕ್ಲಬ್ ಚಾಲೇಂಜರ್ಸ್ ಆರ್ಎಫ್ಸಿ ರ್ಯಾಲಿಯಲ್ಲಿ, ತಮಿಳುನಾಡಿನ ದಿ ಪಾಲರ್ ಚ್ಯಾಲೆಂಜ್ ಆಫ್ ರೋಡ್ನಲ್ಲಿ ಹಾಗೂ ಹಲವು ರ್ಯಾಲಿಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದೆ. ಜೊತೆಗೆ ಕೊಡಗಿನ ಚೆಟ್ಟಿಮಾನಿ, ಕಾನೂರ್, ಐಕುಂದ್ ಆಫ್ ರೋಡ್ ಫನ್ ಡ್ರೈವ್ ರ್ಯಾಲಿಯನ್ನು , ಅಮ್ಮತ್ತಿಯಲ್ಲಿ ಹಲವು ವರ್ಷಗಳಿಂದ ಆಟೋಕ್ರಾಸ್ ರ್ಯಾಲಿಯನ್ನು ಆಯೋಜಿಸಿ ಕೊಡಗಿನ ಯುವ ರ್ಯಾಲಿ ಪಟುಗಳಿಗೆ ವೇದಿಕೆ ಕಲ್ಪಿಸುವಲ್ಲಿ ಶ್ರಮಿಸುತ್ತಿದೆ.
-ಕರುಣ್ ಕಾಳಯ್ಯ