(ತಾ. 21 ರ ಸಂಚಿಕೆಯಿಂದ) ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಬಗ್ಗೆ ನಾವು ಹಲವಾರು ಕತೆಗಳನ್ನು ಓದಿದ್ದೇವೆ. ಆದರೂ ನಾವು ಒಗ್ಗಟ್ಟಿನಿಂದ ಬಾಳಲು ತಯಾರಿಲ್ಲ. ಪರಸ್ಪರ ದೂಷಣೆಯಲ್ಲಿ ಕಾಲ ಕಳೆಯುತ್ತಿದ್ದೇವೆ. ನಮ್ಮಲ್ಲಿ ಕೆಲವರು ತಾವೇ ಬುದ್ಧಿವಂತರೆಂದೂ, ತಾವು ಏನನ್ನು ಬೇಕಾದರೂ ಸೃಷ್ಟಿಸಬಲ್ಲವರೆಂದೂ, ತಮ್ಮಿಂದಲೇ ಈ ಸಮಾಜದ ಏಳಿಗೆ ಸಾಧ್ಯವೆಂದು ಭಾವಿಸಿದ್ದಾರೆ. ಗುರುಕುಲವೊಂದರಲ್ಲಿ ವಿದ್ಯೆ ಕಲಿತ ನಾಲ್ವರು ಯುವಕರು ಕಾಡಿನ ಮಧ್ಯೆಯಲ್ಲಿ ಹೋಗುತ್ತಿರುವಾಗ ದಾರಿಯಲ್ಲಿ ಕೆಲವು ಎಲುಬುಗಳನ್ನು ಕಂಡರು. ಅದರಲ್ಲಿ ಒಬ್ಬನು ಅದು ಸಿಂಹದ ಮೂಳೆಗಳೆಂದು ಹೇಳಿದನು. ಇನ್ನೊಬ್ಬನು ಅದಕ್ಕೆ ತಾನು ಕಲಿತ ವಿದ್ಯೆಯಿಂದ ಅದನ್ನು ಜೋಡಿಸಿ ಚರ್ಮ ಹಾಗೂ ಮಾಂಸಗಳನ್ನು ಜೋಡಿಸಿದನು. ಮೂರನೆಯವನು ತಾನು ಕಲಿತ ವಿದ್ಯೆಯಿಂದ ಅದಕ್ಕೆ ಜೀವ ನೀಡುವದಾಗಿ ಹೇಳಿದನು. ಈ ರೀತಿ ಜೀವ ನೀಡುವದರಿಂದ ನಾವು ನಮ್ಮ ವಿನಾಶವನ್ನು ನಾವೇ ತಂದುಕೊಳ್ಳುವದಾಗಿ ಹೇಳಿ ಪರಿಪರಿಯಾಗಿ ಅದಕ್ಕೆ ಜೀವ ನೀಡುವದು ಬೇಡವೆಂದು ವಿನಂತಿಸಿದನು. ಆದರೆ ಆತನ ಮಾತನ್ನು ಯಾರು ಕೇಳದ್ದರಿಂದ ಆತ ಮರವೇರಿ ಕುಳಿತ. ಜೀವ ನೀಡಿದ್ದರಿಂದ ಎಚ್ಚೆತ್ತ ಸಿಂಹವು ಉಳಿದ ಮೂವರನ್ನು ತಿಂದು ತೇಗಿತು. ಇದೇ ರೀತಿ ಮುಂಬರುವ ಅಪಾಯವನ್ನು ಲೆಕ್ಕಿಸದೆ ತಮ್ಮ ಜೀವನದ ಅಂತ್ಯವನ್ನು ಬಯಸದೆ ಇದ್ದು, ಅಂತ್ಯ ಕಂಡುಕೊಳ್ಳುವ ಹಲವಾರು ಬುದ್ಧಿವಂತರನ್ನು ನಾವು ಕಾಣುತ್ತೇವೆ.
ಇತ್ತೀಚೆಗೆ ಕೊಡಗಿಗೆ ವಿವಿಧ ಚಟುವಟಿಕೆಗಳಿಗಾಗಿ ಪ್ರವಾಸಿಗರು ಮತ್ತು ಬೇರೆ ರಾಜ್ಯದ ವ್ಯಕ್ತಿಗಳು ಧಾಳಿ ಇಡುತ್ತಿದ್ದಾರೆ. ಪ್ರವಾಸಕ್ಕೆಂದು ಬಂದವರು ತಮ್ಮ ಅನೈತಿಕ ಚಟುವಟಿಕೆಗಳಿಂದ ಇಡೀ ಜಿಲ್ಲೆಯನ್ನು ಕಸದ ಡಬ್ಬಿ ಮಾಡಿದ್ದಾರೆ. ಪ್ರವಾಸಿಗರನ್ನು ಆಕರ್ಷಿಸಲು ಕೆಲವರು ಅನೈತಿಕ ವ್ಯವಹಾರಕ್ಕೆ ಮುಂದಡಿ ಇಟ್ಟಿದ್ದಾರೆ. ಗಾಂಜಾ, ಅಫೀಮುಗಳು ರಾಜಾರೋಷವಾಗಿ ಮಾರಾಟವಾಗುತ್ತಿದೆ. ನಮ್ಮ ಯುವಜನಾಂಗ ಮಾದಕ ದ್ರವ್ಯಗಳ ದಾಸರಾಗಿದ್ದಾರೆ. ಪಾಶ್ಚಾತ್ಯ ಸಂಸ್ಕøತಿಯ ಜನ ತಮ್ಮ ಮಕ್ಕಳನ್ನು ಬೇಕಾಬಿಟ್ಟಿ ಬೆಳೆಸಿದ್ದರಿಂದ ಎಳೆ ವಯಸ್ಸಿನಲ್ಲಿ ಅಸ್ವಾಭಾವಿಕವಾಗಿ ಮರಣ ಹೊಂದುತ್ತಿದ್ದಾರೆ. ಕೂಲಿ ಕೆಲಸಕ್ಕೆಂದು ಪರ ರಾಜ್ಯಗಳಿಂದ ಆಗಮಿಸಿದವರು ಮೆಲ್ಲಗೆ ಜಿಲ್ಲೆಯನ್ನು ಆಕ್ರಮಿಸುವದು ನೋಡಿದರೆ ಅರಬನೊಬ್ಬನ ಒಂಟೆ ಆತನ ಡೇರೆಯಲ್ಲಿ ತನ್ನ ಡುಬ್ಬಕ್ಕೆ ಜಾಗ ಬೇಡಿದ್ದು ನಂತರದ ದಿನಗಳಲ್ಲಿ ಇಡೀ ಡೇರೆಯನ್ನು ಆಕ್ರಮಿಸಿ ಅರಬನನ್ನು ಹೊರದಬ್ಬಿದಂತೆ ವಲಸಿಗರು ಇಲ್ಲಿನ ಜನಾಂಗವನ್ನು ಹೊರ ದಬ್ಬುವ ದಿನಗಳು ದೂರವಿಲ್ಲ. ಆದರೂ ನಾವು ಇವುಗಳ ಬಗ್ಗೆ ನಿರ್ಲಕ್ಷ್ಯವಹಿಸಿದ್ದೇವೆಂದು ಹೇಳಿದರೆ ತಪ್ಪಿಲ್ಲ. ಇವುಗಳಲ್ಲದೆ ನಮ್ಮಲ್ಲಿ ಇನ್ನೊಂದು ದೋಷವೂ ಇದೆ. ಇನ್ನೊಬ್ಬರ ಬಗ್ಗೆ ನಾವು ಕಟುವಾಗಿ ನುಡಿಯುತ್ತೇವೆ.
(ಮುಂದುವರೆಯುವದು)
- ಮುಕ್ಕಾಟಿರ ಚೋಟು ಅಪ್ಪಯ್ಯ, ನಿವೃತ್ತ ಎಸ್.ಪಿ. ಪಾರಾಣೆ.