ಮಡಿಕೇರಿ, ಏ. 24: ಮುಂದಿನ ಮೇ 12 ರಂದು ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಸಂಬಂಧ, ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮ ದಿನವಾದ ಇಂದು ಸೇರಿದಂತೆ ಒಟ್ಟು 25 ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ಪೈಕಿ ಕಡೆಯ ದಿನವಾದ ಇಂದು ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಹಿತ ಒಟ್ಟು ಹತ್ತು ಮಂದಿ ಸ್ಪರ್ಧೆಗಿಳಿದಿದ್ದಾರೆ. ಇನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಹಿತ ಒಟ್ಟು 6 ಮಂದಿ ಉಮೇದುವಾರಿಕೆ ಸಲ್ಲಿಸಿದ್ದು, ಇದುವರೆಗೆ ಅಂತಿಮವಾಗಿ 25 ಅಭ್ಯರ್ಥಿಗಳು ಅಖಾಡಕ್ಕಿಳಿದಿದ್ದಾರೆ.
ನಿನ್ನೆಯ ತನಕ ಎರಡು ವಿಧಾನಸಭಾ ಕ್ಷೇತ್ರಗಳಿಂದ ತಲಾ ಐವರು ಉಮೇದುವಾರಿಕೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪೈಕಿ ನಾಪಂಡ ಎಂ. ಮುತ್ತಪ್ಪ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿನ್ನೆ ಹಾಗೂ ಇಂದು ಕೂಡ ಉಮೇದುವಾರಿಕೆ ಸಲ್ಲಿಸಿರುವ ಕಾರಣ ನಾಮಪತ್ರ ಸಲ್ಲಿಸಿರುವವರು 25 ಮಂದಿಯಾಗಿದ್ದಾರೆ.
ಮಡಿಕೇರಿ ಕ್ಷೇತ್ರ : ಇಂದು ಮಡಿಕೇರಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಚಿಯಂಡಿರ ಕಿಶನ್ ಉತ್ತಪ್ಪ, ಎಂಇಪಿ ವತಿಯಿಂದ ರಷೀದಾ ಬೇಗಂ, ಆರ್‍ಪಿಐ ವತಿಯಿಂದ ಕೆ.ಪಿ. ರಾಜು, ಹಿಂದೂ ಮಹಾಸಭಾದಿಂದ ಸಿ.ಜೆ. ಭಾರ್ಗವ ಉಮೇದುವಾರಿಕೆ ಸಲ್ಲಿಸಿದ್ದಾರೆ. ಉಳಿದಂತೆ ಎಂ. ಖಲೀಲ್, ವೆಂಕಟೇಶ್, ಮಹಮ್ಮದ್ ಹನೀಫ್, ಹೇಮಂತ್‍ಕುಮಾರ್ ಅವರುಗಳು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿರುವದಾಗಿ ಚುನಾವಣಾಧಿಕಾರಿ ರಮೇಶ್ ಕೆ. ಕೋನಾರೆಡ್ಡಿ ಹಾಗೂ ಸಹಾಯಕ ಚುನಾವಣಾಧಿಕಾರಿ ಎಸ್.ಕೆ. ಶಾರದಾಂಭ ಮಾಹಿತಿ ನೀಡಿದ್ದಾರೆ.
ವೀರಾಜಪೇಟೆ ಕ್ಷೇತ್ರ : ಅಲ್ಲದೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬಿಜೆಪಿ ಅಭ್ಯರ್ಥಿಯೊಂದಿಗೆ ಬಂಡಾಯ ಕಾಂಗ್ರೆಸ್ಸಿಗರಲ್ಲದೆ, ಪಕ್ಷೇತರರಾಗಿ ಅಚ್ಚಪಂಡ ಗಿರಿ ಉತ್ತಪ್ಪ, ಪಿ.ಎಸ್. ಮುತ್ತ ಹಾಗೂ ಎಂ.ಕೆ. ಫೈಝಲ್ ಎಂಬವರು ಉಮೇದುವಾರಿಕೆ ಸಲ್ಲಿಸಿದ್ದಾರೆ. ತಾ. 25 ರಂದು (ಇಂದು) ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಎಲ್ಲಾ ಅಭ್ಯರ್ಥಿಗಳ ಉಮೇದುವಾರಿಕೆ ಸಮರ್ಪಕವಿದ್ದಲ್ಲಿ ಕಣದಲ್ಲಿ ಉಳಿಯಲಿದ್ದಾರೆ. ತಪ್ಪಿದಲ್ಲಿ ಅಂತಹ ನಾಮಪತ್ರಗಳು ತಿರಸ್ಕøತಗೊಳ್ಳಲಿದ್ದು, ತಾ. 27ರ ತನಕ ಕಣದಿಂದ ಹಿಂದೆ ಸರಿಯಲು ಕಾಲಾವಕಾಶವಿದೆ.