ಕುಶಾಲನಗರ, ಏ. 24: ಕುಶಾಲನಗರ ಗಡಿಭಾಗದ ಅರಣ್ಯ ಚೆಕ್‍ಪೋಸ್ಟ್ ಬಳಿ ಚುನಾವಣಾ ತಪಾಸಣಾ ಕೇಂದ್ರದಲ್ಲಿ ಲಾರಿ ಚಾಲಕನೊಬ್ಬ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನನ್ನು ಬಂಧಿಸಲಾಗಿದ್ದು ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಸೋಮವಾರ ಸಂಜೆ ವೇಳೆ ಕೊಪ್ಪ ಕಡೆಯಿಂದ ಲಾರಿಯೊಂದು (ಕೆಎ.09.ಸಿ.6732) ಕುಶಾಲನಗರದ ಕಡೆಗೆ ಬರುತ್ತಿದ್ದ ಸಂದರ್ಭ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಲ್ಲಿಸುವಂತೆ ಸೂಚನೆ ನೀಡಿದರೂ ಲಾರಿ ಚಾಲಕ ಭರತ್ ಎಂಬಾತ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿ ಅಧಿಕಾರಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ಮಾಡಿರುವದಾಗಿ ಚುನಾವಣಾ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಹೆಚ್.ಎಸ್.ರಾಜಶೇಖರ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ತಪಾಸಣೆಗೊಳಪಡಿಸಿದಾಗ ಸಿಬ್ಬಂದಿಗಳಿಗೆ ಏಕವಚನ ಹಾಗೂ ಅವಾಚ್ಯ ಶಬ್ಧ ಬಳಸಿ ಕರ್ತವ್ಯಕ್ಕೆ ತೊಂದರೆ ಉಂಟು ಮಾಡಿರುವದಾಗಿ ತಿಳಿಸಿದ್ದು ಈ ಬಗ್ಗೆ ಕಾನೂನು ಕ್ರಮಕೈಗೊಳ್ಳುವಂತೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡು ಭರತ್‍ನನ್ನು ಬಂಧಿಸಿ ಕ್ರಮಕೈಗೊಂಡಿದ್ದಾರೆ. ಠಾಣಾಧಿಕಾರಿ ಜಗದೀಶ್, ವೃತ್ತ ನಿರೀಕ್ಷಕ ಕ್ಯಾತೆಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.