ಗೋಣಿಕೊಪ್ಪಲು, ಏ. 24: ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯ ಗೊಳ್ಳುತ್ತಿದ್ದಂತೆಯೆ ರಾಜಕೀಯ ರಂಗೇರತೊಡಗಿದೆ. ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ ವಾಣಿಜ್ಯ ನಗರ ಗೋಣಿಕೊಪ್ಪಲುವಿಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ.

ತಾ. 27 ರಂದು ರಾಹುಲ್‍ಗಾಂಧಿ ಕರ್ನಾಟಕ ರಾಜ್ಯಕ್ಕೆ ಆಗಮಿಸುತ್ತಿದ್ದು, ಅಂದು ಗೋಣಿಕೊಪ್ಪಲುವಿನ ದಸರಾ ಮೈದಾನದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಧರ್ಮಸ್ಥಳದ ಕಾರ್ಯಕ್ರಮ ಮುಗಿಸಿ ನಂತರ ಮಧ್ಯಾಹ್ನ 3 ಗಂಟೆಗೆ ಗೋಣಿ ಕೊಪ್ಪಲುವಿನ ಕಾವೇರಿ ಕಾಲೇಜು ಮೈದಾನಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ನಂತರ ಕಾಲೇಜು ಆವರಣದಲ್ಲಿರುವ ಕಾವೇರಿ ಪುತ್ಥಳಿಗೆ, ವೀರ ಸೇನಾನಿಗಳಾದ ಜನರಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಕಾರಿನಲ್ಲಿ ನೇರವಾಗಿ ದಸರಾ ಮೈದಾನಕ್ಕೆ ಆಗಮಿಸಲಿದ್ದು, ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ.ರಾಹುಲ್‍ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಇಂದು ದಸರಾ ಮೈದಾನಕ್ಕೆ ಆಗಮಿಸಿದ ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಎಸ್.ಜಿ.ಪಿ ತಂಡ ಡಿ.ವೈ.ಎಸ್.ಪಿ ಹಾಗೂ ಹಲವು ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ತಾಲೂಕು ದಂಡಾಧಿಕಾರಿಗಳಾದ ಗೋವಿಂದರಾಜ್ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ತೀತಿರÀ

(ಮೊದಲ ಪುಟದಿಂದ) ಧರ್ಮಜ, ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಅಜಿತ್ ಅಯ್ಯಪ್ಪ ಮುಂತಾದವರು ಹಾಜರಿದ್ದರು.

ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ರಾಜ್ಯ ಅಧ್ಯಕ್ಷರಾದ ಜಿ. ಪರಮೆಶ್ವರ್, ಕಾರ್ಯಧ್ಯಕ್ಷ ದಿನೇಶ್‍ಗುಂಡೂರಾವ್ ಸೇರಿದಂತೆ ಹಲವು ನಾಯಕರು ಆಗಮಿಸಲಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಅಂದು ಸೇರಲಿದ್ದಾರೆ. ಈ ಬಗ್ಗೆ ಈಗಾಗಲೇ ಹಲವು ಸುತ್ತಿನ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ ಎಂದು ಶಿವುಮಾದಪ್ಪ ತಿಳಿಸಿದ್ದಾರೆ. -ಹೆಚ್.ಕೆ. ಜಗದೀಶ್