*ಗೋಣಿಕೊಪ್ಪಲು, ಏ. 24: ಬಾಳೆಲೆ ದೇವನೂರು ‘ಬಿ’ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸಮಸ್ಯೆ ಬಗೆಹರಿಸದಿದ್ದರೆ, ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗ್ರಾಮದಲ್ಲಿನ ಕಾಲೋನಿ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನೀರು ಸರಬರಾಜು ಮಾಡುವ 110 ಅಡಿಯ ಕೊಳವೆ ಬಾವಿಯನ್ನು ದುರಸ್ತಿ ಮಾಡುವ ಸಂದರ್ಭ ಕಬ್ಬಿಣದ ಹಾರೆಯೊಂದು ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿದ್ದು, ನೀರು ತೆಗೆಯಲು ಮೋಟರನ್ನು ಕೊಳವೆ ಬಾವಿಗೆ ಇಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಳೆದ ಒಂದು ತಿಂಗಳಿಂದ ನೀರಿನ ಅಭಾವ ಎದುರಾಗಿದೆ. ಸ್ಥಳೀಯ ಪಂಚಾಯಿತಿಗೆ ಈ ಬಗ್ಗೆ ಮನವಿ ಸಲ್ಲಿಸಿದರೆ ಚುನಾವಣೆ ನೀತಿ ಸಂಹಿತೆ ಹಾಗೂ ಹಣಕಾಸಿನ ನೆಪವೊಡ್ಡಿ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಈ ಹಿನ್ನೆಲೆ ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಈ ಸಂದರ್ಭ ಗ್ರಾಮಸ್ಥರಾದ ಅಡ್ಡೇಂಗಡ ನವೀನ್, ಪಾರುವಂಗಡ ದಿಲನ್, ಅರಮಣಮಾಡ ಜಿûೀಲ್, ಮಲೆಯಾಳಿ ಸುಬ್ರಮಣಿ, ರಾಜೀವ್, ಶಶಿ ಹಾಜರಿದ್ದರು.