ವೀರಾಜಪೇಟೆ, ಏ. 24: ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಸತತ ಮೂರನೇ ಬಾರಿಗೆ ಕಣಕ್ಕೆ ಇಳಿದಿರುವ ಹಾಲೀ ಶಾಸಕ ಕೆ.ಜಿ. ಬೋಪಯ್ಯ ಅವರು ಇಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ಧಾವಿಸಿ ಇಲ್ಲಿನ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ವೀರಾಜಪೇಟೆಯ ತೆಲುಗರ ಬೀದಿಯಲ್ಲಿರುವ ಶ್ರೀ ಮಾರಿಯಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಮುಖ್ಯಬೀದಿಯಲ್ಲಿ ಮೆರವಣಿಗೆ ಮೂಲಕ ಸಾಗಿದರು.ಪಟ್ಟಣದ ಮುಖ್ಯ ಬೀದಿಗಳಲ್ಲಿ ಕಾರ್ಯಕರ್ತರ ಜೈ ಘೋಷಗಳೊಂದಿಗೆ ಮುಂದೆ ಸಾಗುತ್ತಾ, ಗಡಿಯಾರ ಕಂಬ ಬಳಿಯ ಶ್ರೀ ಮಹಾಗಣಪತಿಗೆ ಪೂಜೆ ನೆರವೇರಿಸಿದರು. ಅಲ್ಲಿಂದ ಅಪಾರ ಸಂಖ್ಯೆಯಲ್ಲಿದ್ದ ಕಾರ್ಯಕರ್ತರ ಹರ್ಷೋದ್ಗಾರದೊಂದಿಗೆ ತಾಲೂಕು ಮೈದಾನಕ್ಕೆ ಸಾಗಿದ ಮೆರವಣಿಗೆ, ಬಳಿಕ ನೆರೆದಿದ್ದವರನ್ನು ಉದ್ದೇಶಿಸಿ ಅಭ್ಯರ್ಥಿ ಬೋಪಯ್ಯ ಹಾಗೂ ಇತರ ಪ್ರಮುಖರು ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ ಜಮ್ಮಾ ಹಿಡುವಳಿಯ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದ್ದು, ಈ ಸಂಬಂಧದಲ್ಲಿ ಸರಕಾರ ಹೊರಡಿಸಿದ್ದ ಮೂರು

(ಮೊದಲ ಪುಟದಿಂದ) ಸುತ್ತೋಲೆಗಳನ್ನು ಹಿಂಪಡೆಯಲು ಶಾಸಕದ್ವಯರಾದ ತಾವು ಹೋರಾಟ ನಡೆಸಿದ್ದು, ನಂತರ ಬಂದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ನಿರಂತರ ಕೋಮು ಗಲಭೆಯನ್ನು ಸೃಷ್ಟಿಸಿ ಜನತೆಗೆ ನೆಮ್ಮದಿ ಇಲ್ಲದಂತೆ ಮಾಡಿದೆ ಎಂದು ಬೋಪಯ್ಯ ಆರೋಪಿಸಿದರು. ಬಿಜೆಪಿ ಸರ್ಕಾರ ಈ ಚುನಾವಣೆಯಲ್ಲಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಪಣತೊಟ್ಟಿದೆ ಎಂದು ಅವರು ಈ ಸಂದರ್ಭ ಮಾರ್ನುಡಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ನಾಮಪತ್ರ ಸಲ್ಲಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಐದು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯ. ಕೊಡಗಿನ ಜನತೆ ಟಿಪ್ಪು ಜಯಂತಿಗೆ ಪೂರ್ಣ ವಿರೋಧವಿದ್ದರೂ, ಟಿಪ್ಪು ಜಯಂತಿ ಪರ ಒಂದು ವರ್ಗಕ್ಕೆ ಕುಮ್ಮಕ್ಕು ನೀಡಿ ಕೋಮು ಗಲಭೆಗೆ ಅವಕಾಶ ನೀಡುವದರೊಂದಿಗೆ ಕೆಲವರ ಹತ್ಯೆಗೆ ಕಾರಣವಾಯಿತು ಎಂದರು. ಕೊಡಗಿನಲ್ಲಿ ರೈತರ ಆತ್ಮಹತ್ಯೆ, ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಜಿಲ್ಲೆಯ ಜಲ್ವಂತ ಸಮಸ್ಯೆಗಳಿಗೆ ಸಿದ್ದರಾಮಯ್ಯ ಸರ್ಕಾರ ಕಾರಣ ವಾಗಿರುವದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಕೊನೆಗೊಳ್ಳಲಿದೆ ಎಂದು ಭವಿಷ್ಯ ನುಡಿದರು. ಕಳೆದ ವರ್ಷ ಜೂನ್ ತಿಂಗಳಲ್ಲಿ ರೈತರ ಸಾಲ ರೂ. 50 ಸಾವಿರ ಮನ್ನಾಮಾಡುವ ದಾಗಿ ಘೋಷಿಸಿ ರೈತರನ್ನು ವಂಚಿಸಿದೆ ಎಂದು ಟೀಕಿಸಿದರು. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕೊಡಗು ಜಿಲ್ಲೆಗೆ ರೂ.900 ಕೋಟಿ ಅನುದಾನ ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರದಿಂದ ಜಿಲ್ಲೆಗೆ ಅನುದಾನ ಶೂನ್ಯ. ರಾಜ್ಯದ ಜನತೆ ಆಡಳಿತದಲ್ಲಿ ಬದಲಾವಣೆಯನ್ನು ಬಯಸಿದ್ದಾರೆ ಎಂದರು.

ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದಿಂದ ಪರಿಹಾರ ದೊರೆಯಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ ಆಧಾರದ ಮೇಲೆ ಗೆದ್ದು, ಪ್ರಧಾನಿ ಸ್ಥಾನಕ್ಕೆ ಬಂದಿಲ್ಲ. ಮೋದಿ ಈ ಸ್ಥಾನಕ್ಕೆ ಬರಲು ರಾಜಕೀಯ ಪ್ರಭಾವದ ಹಿನ್ನಲೆ ಇದೆ. ಸಿದ್ಧರಾಮಯ್ಯ ಅವರು ಜಾತಿ ಜಾತಿ ನಡುವೆ ವಿಷದ ಬೀಜ ಬಿತ್ತಿ ರಾಜ್ಯದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತಂದು ಅಧಿಕಾರಕ್ಕೇರಲು ಸಾಧ್ಯವಿಲ್ಲ. ಈ ಬಾರಿ ರಾಜ್ಯದ ಜನತೆ ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.

ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯ ಸರಕಾರದ ದುರಾಡಳಿತ ಭ್ರಷ್ಟಾಚಾರ ಕೋಮು ಗಲಭೆಗೆ ಪ್ರಚೋದನೆ ವಿರುದ್ಧ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಮಾಡುವದರೊಂದಿಗೆ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ಉಚಿತ ಅನಿಲ ಕೊಡುಗೆ ಬಡವರಿಗೆ ವಿಮಾ ಯೋಜನೆ, ಆಯ್ದ ಸ್ಥಳಗಳಲ್ಲಿ ಜನ ಔಷಧಿ ಕೇಂದ್ರಗಳು, ಪಡಿತರ ಚೀಟಿ ಮೂಲಕ ವಿತರಿಸುವ ಸಾಮಾಗ್ರಿಗಳಿಗೆ ಸಹಾಯಧನ ಇತ್ಯಾದಿ ಸಾಧನೆಯನ್ನು ತಿಳಿಸಲು ಕರೆ ನೀಡಿದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಭಾರತೀಶ್ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ರಾಜ್ಯಕ್ಕಾಗಿ ಕಾರ್ಯಕರ್ತ ರೆಲ್ಲರೂ ಒಂದಾಗಿ ಶ್ರಮಿಸಬೇಕು, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕೋಮು ಗಲಭೆಗಳು, ಕೊಲೆ ದರೋಡೆ ಹೆಚ್ಚಾಗಿದೆ. ಈ ಸರಕಾರದ ಅಧಿಕಾರವನ್ನು ಕೊನೆಗಾಣಿಸಿದರೆ ಮಾತ್ರ ಶಾಂತಿ ನೆಮ್ಮದಿ ಸಾಧ್ಯ ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ಪಕ್ಷದ ರಾಜ್ಯ ಸಮಿತಿಯ ಮನು ಮುತ್ತಪ್ಪ, ಬೋಸ್ ದೇವಯ್ಯ, ಅರುಣ್ ಭೀಮಯ್ಯ ಮಾತನಾಡಿದರು. ವೇದಿಕೆಯಲ್ಲಿ ಕಾಫಿ ಮಂಡಳಿಯ ರೀನಾ ಪ್ರಕಾಶ್, ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಬಿ.ಎ.ಹರೀಶ್, ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಕೇರಳದ ಕಣ್ಣಾನೂರಿನ ರಂಜನ್ ಮತ್ತಿತರರು ಉಪಸ್ಥಿತರಿದ್ದರು.