ಮಡಿಕೇರಿ, ಏ. 24: ಸೃಷ್ಟಿಯ ಕಣಕಣದಲ್ಲೂ ತನ್ನನ್ನು ಕಾಣುವ ಸಂಸ್ಕøತಿ ಭಾರತೀಯರದ್ದಾಗಿದ್ದು, ವಸುದೈವ ಕುಟುಂಬಕಂ ಎಂಬ ಹೇಳಿಕೆಗೆ ತಕ್ಕಂತೆ ನಾವು ನಡೆಯುತ್ತೇವೆ ಎಂದು ಅಂತರ್ರಾಷ್ಟ್ರೀಯ ವಿಶ್ವಹಿಂದೂ ಪರಿಷತ್ ಜಂಟಿ ಮಹಾಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈನ್ ಹೇಳಿದರು.
ಅವರು ಇಂದು ಅತ್ತೂರಿನಲ್ಲಿ ಇಸ್ರೇಲ್ ಮೂಲದಿಂದ, ಹಿಂದೂ ಧರ್ಮಕ್ಕೆ ಆಕರ್ಷಿತರಾಗಿ ಸ್ವಾಮಿ ಮುಕ್ತಾನಂದರಿಂದ ಪ್ರೇರೇಪಿತರಾಗಿ ಸೋಹಂ ಯೋಗಕ್ರಮ ಪ್ರಚಾರ ಮಾಡುತ್ತಾ ದೈವಾಧೀನರಾದ ನಾರದ ಮುನಿಗಳ ಸ್ಮಾರಕಕ್ಕೆ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಸೋಹಂ ಯೋಗ ಗುರುಗಳಾಗಿ ದೇಶವಿದೇಶಗಳಲ್ಲಿ ಅನುಯಾಯಿ ಗಳನ್ನು ಹೊಂದಿದ್ದ ನಾರದ ಮುನಿಗಳು ಭಾರತದಲ್ಲೇ ತನ್ನ ಅಂತ್ಯಕ್ರಿಯೆ ಮಾಡಬೇಕೆಂದು ಬಯಸಿದ್ದರು. ಮೈಸೂರಿನಲ್ಲಿ ಅಂತ್ಯಕ್ರಿಯೆಗೆ ತಯಾರು ಮಾಡುವಾಗ ಕಾನೂನಾತ್ಮಕ ಅಡ್ಡಿಗಳುಂಟಾಗಿ, ಅತ್ತೂರಿನ ತೋಟದಲ್ಲಿ ಅಂತ್ಯಕ್ರಿಯೆ ನಡೆಸಲು ಬೆಳೆಗಾರರು, ಉದ್ಯಮಿಗಳೂ ಆದ ಛಾಯ ನಂಜಪ್ಪ ಮತ್ತು ಕುಪ್ಪಂಡ ರಾಜಪ್ಪ ದಂಪತಿಗಳು ಅನುವು ಮಾಡಿದರು. 2012ರಲ್ಲಿ ತೋಟದೊಳಗೆ ಅಂತ್ಯಕ್ರಿಯೆ ನಡೆದು, ಇಂದು ಸುಂದರವಾದ ಸ್ಮಾರಕ ನಿರ್ಮಾಣಗೊಂಡು ಲೋಕಾರ್ಪಣೆ ಗೊಂಡಿತು.
ಮಾತಿನ ನಡುವೆ ಭಾರತದ ಧರ್ಮಸಹಿಷ್ಣುತೆಯನ್ನು ಕೊಂಡಾಡಿದ ಸುರೇಂದ್ರ ಕುಮಾರ್, ಕೇರಳದ ದೇವಾಲಯ ಒಂದರ ಜಾಗವನ್ನು ಮಸೀದಿ ಕಟ್ಟಲು ನೀಡಿರುವ ಉದಾಹರಣೆ ಉಲ್ಲೇಖಿಸಿದರು. ಹಿಂದೂ-ಯಹೂದಿ ಸ್ನೇಹ ಸೃಷ್ಟಿ ಇರುವ ತನಕ ಉಳಿಯುತ್ತದೆ ಎಂದರು.
ಇಸ್ರೇಲಿನ ಸೇನಾ ನಾಯಕಿ ಯಾಗಿದ್ದು, ನಾರದ ಮುನಿಯವರ ಅನುಯಾಯಿಯಾದ ಮಹಾಯೋಗಿನಿ ಅನಿಲ ಮಾತನಾಡಿ, ಜುಡಾಯಿಜಂ ಮತ್ತು ಹಿಂದೂ ಧರ್ಮ ಒಂದೇ ದೇವರನ್ನು ಆರಾಧಿಸುವ ವಿಶಿಷ್ಟ ಧರ್ಮಗಳು ಎಂದರು. ಭಾರತ ಮತ್ತು ಇಸ್ರೇಲಿಗೆ ಆಧ್ಯಾತ್ಮಿಕ ಬಂಧನವಿದ್ದು, ಸೋಹಂ ಕ್ರಿಯೆಯ ಮೂಲಕ ವಸುದೇವ ಕುಟುಂಬಕಂ ತತ್ವ ವಿಶ್ವದ ಎಲ್ಲೆಡೆ ಹಬ್ಬುವಂತಾಗಲಿ ಎಂದರು.
ಆರ್‍ಎಸ್‍ಎಸ್‍ನ ವಿಶ್ವವಿಭಾಗ ಸಂಯೋಜಕ ರವಿಕುಮಾರ್ ಅವರು ಮಾತನಾಡಿ, ಭಾರತ ಮತ್ತು ಇಸ್ರೇಲ್ ಇತ್ತೀಚೆಗಷ್ಟೇ ಒಪ್ಪಂದಗಳಿಗೆ ಸಹಿ ಹಾಕುತ್ತಿದ್ದರೂ, ಈ ದೇಶಗಳ ಸಂಬಂಧ 2500 ವರ್ಷಗಳಷ್ಟು ಹಿಂದಿನದು ಎಂದರು. ಇಸ್ರೇಲಿನಲ್ಲಿ ಎಂಬತ್ತು ಸಾವಿರ ಯಹೂದಿಗಳು ಮಲೆಯಾಳ-ಮರಾಠಿ ಮಾತನಾಡುವವರಿದ್ದು, ಇಸ್ರೇಲಿನ ಸಂಬಂಧ ಚರಿತ್ರೆಯಲ್ಲಿ ಸೇರಿದೆ ಎಂದರು. ಇಸ್ರೇಲ್ ತಮ್ಮ ಹೃದಯದಲ್ಲಿದ್ದರೆ ಭಾರತೀಯತೆ ಅವರ ರಕ್ತದಲ್ಲಿ ಹರಿಯುತ್ತಿದೆ ಎಂದು ವಿವರಿಸಿದ ಅವರು, ಇದೊಂದು ಸಮಾಧಿ ಸ್ಥಾನವಾಗದೇ ಪುಣ್ಯ ಕ್ಷೇತ್ರವಾಗಲಿ ಎಂದು ನಾರದ ಮುನಿ ಸ್ಮಾರಕದ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಎಡಿಜಿ ಭಾಸ್ಕರ್ ರಾವ್, ಕಾಶ್ಮೀರ ಪಂಡಿತರ ಪುನರ್ವಸತಿ ವಿಭಾಗದ ಸುಶೀಲ್ ಪಂಡಿತ್, ಹಿಂದೂ ಜನ ಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂಡೆ, ಹಿಂದೂ ಸಂಹತಿಯ ರಾಷ್ಟ್ರೀಯ ವಕ್ತಾರ ಪ್ರಸನ್ ಮೈತ್ರ, ಪ್ರೋ. ಶಿವರಾಂ ಮಳವಳ್ಳಿ, ಚೆನ್ನೈ ಹಿಂದೂ ಮಕ್ಕಳ್ ಕಚ್ಚಿಯ ಅಧ್ಯಕ್ಷ ಅರ್ಜುನ್ ಸಂಪತ್ ಉಪಸ್ಥಿತರಿದ್ದರು.
ಛಾಯಾ ನಂಜಪ್ಪ ಹಾಗೂ ರಾಜಪ್ಪ ಸ್ವಾಗತಿಸಿದರು. ಇಸ್ರೇಲ್, ಶ್ರೀಲಂಕಾ, ಆಸ್ಟ್ರೇಲಿಯಾ ಹಾಗೂ ಭಾರತದ ಎಲ್ಲೆಡೆಯಿಂದ ನಾರದ ಮುನಿಗಳ ಅನುಯಾಯಿಗಳು ಆಗಮಿಸಿದ್ದರು.