ವೀರಾಜಪೇಟೆ, ಏ. 24: ನಿನ್ನೆಯಷ್ಟೇ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಪಂಡ ಎಂ. ಮುತ್ತಪ್ಪ ಸ್ಪರ್ಧೆಗಳಿದಿದ್ದರೆ, ಇಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಕದ್ದಣಿಯಂಡ ಹರೀಶ್ ಬೋಪಣ್ಣ ಹಾಗೂ ಮಾಂಗೇರ ಪದ್ಮಿನಿ ಪೊನ್ನಪ್ಪ ಅಖಾಡಕ್ಕೆ ಇಳಿದಿದ್ದಾರೆ.
ತಮ್ಮ ಬೆಂಬಲಿಗರೊಡಗೂಡಿ ಸಂಜು ಸುಬ್ಬಯ್ಯ, ಕಲಿಯಂಡ ಸೋಮಣ್ಣ, ಶ್ಯಾಂ ಬೋಪಣ್ಣ, ಚಕ್ರವರ್ತಿ ಪೊನ್ನಣ್ಣ, ಬೋಜಣ್ಣ ರೊಂದಿಗೆ ಚುನಾವಣಾಧಿಕಾರಿ ಕೆ. ರಾಜು ಅವರಿಗೆ ಹರೀಶ್ ಉಮೇದುವಾರಿಕೆ ಸಲ್ಲಿಸಿದರು.ಅಸಮಾಧಾನ : ಜಿಲ್ಲೆಯ ಅಭಿವೃದ್ಧಿಯೊಂದಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಓರ್ವ ಶಾಸಕನಾಗಿ ಸಾಕಷ್ಟು ಜನಪರ ಕೆಲಸದ ಆಶಯ ಹೊಂದಿದ್ದಾಗಿ ಈ ವೇಳೆ ನುಡಿದ ಅವರು, ಕಾಂಗ್ರೆಸ್ ವರಿಷ್ಠರು ಸೌಜನ್ಯಕ್ಕೂ ತನ್ನ ಅಭಿಪ್ರಾಯ ಕೇಳಲಿಲ್ಲವೆಂದು ಮಾಧ್ಯಮದವರೊಡನೆ ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯವಾಗಿ ಜಿಲ್ಲೆಯಲ್ಲಿ ಅಧಿಕ ಮಳೆಯಾಗುವದರಿಂದ ಪ್ರತಿ ವರ್ಷ ಸರಕಾರ ರೂ. 50 ಕೋಟಿ ಅನುದಾನ ವಿಶೇಷವಾಗಿ ನೀಡಬೇಕು, ಪೊನ್ನಂಪೇಟೆ
(ಮೊದಲ ಪುಟದಿಂದ) ಹಾಗೂ ಕುಶಾಲನಗರ ತಾಲೂಕು ಬೇಡಿಕೆ ಈಡೇರಿಸಬೇಕು, ಈ ನಿಟ್ಟಿನಲ್ಲಿ ವರಿಷ್ಠರಿಂದ ಭರವಸೆ ಲಭಿಸಿದರೆ, ತಾನು ಸ್ಪರ್ಧೆಯಿಂದ ಹಿಂದೆ ಸರಿಯಲು ಸಿದ್ಧನಿರುವದಾಗಿ ಅವರು ಮಾಧ್ಯಮಕ್ಕೆ ತಿಳಿಸಿದರು.
ಪದ್ಮಿನಿ ಅತೃಪ್ತಿ : ಕರ್ನಾಟಕ ಅರಣ್ಯ ನಿಗಮ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಕೆಪಿಸಿಸಿ ವರಿಷ್ಠರ ವಿರುದ್ಧ ತೀವ್ರ ಅತೃಪ್ತಿಯೊಂದಿಗೆ, ಇಂದು ತಮ್ಮ ಉಮೇದುವಾರಿಕೆಯನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸಲ್ಲಿಸಿದರು. ಪತಿ ಮಾಂಗೇರ ಪೊನ್ನಪ್ಪ, ಗಾಂಧಿ ಕಾಳಪ್ಪ, ಅಚ್ಚಯ್ಯ, ರೂಪಾ ನಾಣಯ್ಯ, ಕುಶಾಲಪ್ಪ ಮೊದಲಾದವರೊಂದಿಗೆ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ಅವರು, ಯಾವದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವದಿಲ್ಲವೆಂದು ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದರು.
ಕಳೆದ ಆರು ತಿಂಗಳಿನಿಂದ ವೀರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪೂರ್ವ ತಯಾರಿ ಮಾಡಿಕೊಂಡಿದ್ದರೂ, ವರಿಷ್ಠರು ಸ್ಪಂದಿಸಲಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 2008ರಲ್ಲಿ ಸ್ಪರ್ಧೆ ಬಯಸಿದಾಗ ವೀಣಾ ಅಚ್ಚಯ್ಯ ಅವರಿಕೆ ಟಿಕೆಟ್ ನೀಡಿ, 2013ರಲ್ಲಿ ಮತ್ತೆ ಬಿ.ಟಿ. ಪ್ರದೀಪ್ ಅವರನ್ನು ಕಣಕ್ಕೆ ಇಳಿಸುವದರೊಂದಿಗೆ ತನಗೆ ಸ್ಪರ್ಧೆ ನಿರಾಕರಿಸಲಾಗಿತ್ತು ಎಂದು ವಿಷಾದಿಸಿದರು. ಹೀಗಾಗಿ ಈ ಬಾರಿ ಬಂಡಾಯ ಸ್ಪರ್ಧೆಗೆ ನಿರ್ಧಾರ ಮಾಡಬೇಕಾಯಿತು ಎಂದು ತಮ್ಮ ನೋವು ವ್ಯಕ್ತಪಡಿಸಿದರು.