ಕೂಡಿಗೆ, ಏ. 24: ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿರುವ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯು 2016ರಲ್ಲಿ ಪ್ರಾರಂಭ ಗೊಂಡು ಒಂದು ವರ್ಷ ಮೂರು ತಿಂಗಳು ಕಳೆದಿದ್ದು, ಒಂದು ವರ್ಷದಲ್ಲಿ ಮೋಟಾರ್ ವಾಹನ ಕಾಯಿದೆಯಡಿ 2205 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದ ಪ್ರಕರಣ ಸಂಬಂಧ ರೂ. 3,40,300 ದಂಡ ಸಂಗ್ರಹಿಸಿದೆ. ವಾಹನ ಚಾಲನೆ ಮಾಡುವ ಸಂದರ್ಭ ಮೊಬೈಲ್ ಬಳಕೆ ಮಾಡಿದ್ದಕ್ಕೆ 2,500 ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಿಂದ ರೂ. 14,300 ದಂಡ ವಸೂಲಿ ಮಾಡಲಾಗಿದ್ದು, ಚಾಲನಾ ಪರವಾನಿಗೆ (ಡಿ.ಎಲ್) ಇಲ್ಲದೆ ವಾಹನ ಚಾಲಿಸಿದ 359 ಪ್ರಕರಣ ದಾಖಲಿಸಿಕೊಂಡಿದ್ದು, ಇದರಲ್ಲಿ ರೂ. 1,19,800 ದಂಡ ವಸೂಲಾತಿ ಮಾಡಲಾಗಿದೆ. ಇತರೆ ಸಂಚಾರಿ ನಿಯಮ ಉಲ್ಲಂಘನೆ 1058 ಪ್ರಕರಣದಲ್ಲಿ ರೂ. 2,95,600 ದಂಡ ವಸೂಲಿ ಮಾಡಲಾಗಿದೆ. 2016 ರಿಂದ 2018 ರವರೆಗೆ ರಾಷ್ಟ್ರೀಯ ಹೆದ್ದಾರಿ ನಿಯಮ ಉಲ್ಲಂಘನೆ ಮಾಡಿದ 272 ಪ್ರಕರಣ ದಾಖಲಾಗಿದ್ದು, ರೂ. 16,500 ದಂಡ ವಸೂಲಾಗಿದೆ. ಕಳೆದ ವರ್ಷ ಜಾರಿಗೆ ಬಂದ ಬೈಕ್ ಹಿಂಬದಿ ಸವಾರರಿಗೆ ಹೆಲ್ಮೆಟ್ ಧರಿಸಬೇಕೆಂಬ ನಿಯಮವನ್ನು ಪಾಲಿಸದ್ದಕ್ಕೆ 60 ಪ್ರಕರಣ ದಾಖಲಿಸಿ, ರೂ. 2200 ದಂಡ, ಸಮವಸ್ತ್ರ ಧರಿಸದೇ ವಾಹನ ಚಾಲನೆ ಮಾಡಿದ 90 ಪ್ರಕರಣಗಳು ದಾಖಲಾಗಿದ್ದು, ರೂ. 5000 ದಂಡ ವಸೂಲಾಗಿದೆ. ವಾಹನ ಚಾಲಕರು ವಾಹನ ವಿಮಾ (ಇನ್ಶೂರೆನ್ಸ್) ನಿಯಮ ಪಾಲಿಸದ 10 ಪ್ರಕರಣ ದಾಖಲಾಗಿದ್ದು, ರೂ. 4200 ದಂಡ ವಸೂಲಿ ಮಾಡಲಾಗಿದೆ. ಇಷ್ಟೆಲ್ಲಾ ಸಂಚಾರಿ ನಿಯಮವನ್ನು ಪಾಲಿಸದ ವಾಹನ ಚಾಲಕರಿಂದ ವಸೂಲಿ ಮಾಡಿದ ರೂ. 6,87,800 ರೂಗಳನ್ನು ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸರ್ಕಾರಿ ಸಂದಾಯ ಮಾಡಿದ್ದಾರೆ.

- ಕೆ.ಕೆ. ನಾಗರಾಜ ಶೆಟ್ಟಿ