ಮಡಿಕೇರಿ, ಏ. 24 : ಮಡಿಕೇರಿ ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಲು ಇಲ್ಲಿನ ಅರಣ್ಯ ಪ್ರದೇಶವನ್ನು ಪ್ರಭಾವಿ ರಾಜಕಾರಣಿಯೊಬ್ಬರು ಸೇರಿದಂತೆ ಸುಮಾರು 68 ಕುಟುಂಬಗಳು ಅತಿಕ್ರಮಿಸಿಕೊಂಡಿರುವದೇ ಕಾರಣ ಎಂದು ಆರೋಪಿಸಿರುವ ಕಾವೇರಿ ಸೇನೆ, ಅತಿಕ್ರಮಣವನ್ನು ತೆರವು ಗೊಳಿಸಬೇಕೆಂದು ಮಾಡಿಕೊಂಡ ಮನವಿಗೆ ಅರಣ್ಯ ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ನ್ಯಾಯಾಲಯದ ಮೊರೆ ಹೋಗಿರುವದಾಗಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿಸೇನೆಯ ಸಂಚಾಲಕ ಕೆ.ಎ. ರವಿಚಂಗಪ್ಪ ರಾಜಕಾರಣಿಯೊಬ್ಬರು ನಗರಸಭೆ ಹಾಗೂ ಮೂಡಾದ ಅನುಮತಿ ಇಲ್ಲದೆ ಅರಣ್ಯ ಪ್ರದೇಶಕ್ಕೆ ಸೇರಿದ ಜಾಗದಲ್ಲಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಮಡಿಕೇರಿ ಅರಣ್ಯ ಭವನದ ಬಳಿ ಪ್ರತೀವರ್ಷ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಅರಣ್ಯ ನಾಶವೇ ಕಾರಣವಾಗಿದೆ. ಮಡಿಕೇರಿ ಪಟ್ಟಣದ ಒತ್ತಿನಲ್ಲಿರುವ ಕರ್ಣಂಗೇರಿ ಗ್ರಾಮದ ಸ.ನಂ.289/1ರಲ್ಲಿ 54 ಎಕರೆ ಅರಣ್ಯ ಜಾಗವಿದ್ದು, ಇದನ್ನು ಮಡಿಕೇರಿ ಪೂರ್ವ ಅರಣ್ಯವೆಂದು ಕರೆಯ ಲಾಗುತ್ತಿದೆ. ಪ್ರಾಣಿಗಳು ಓಡಾಡಬೇಕಾಗಿ ರುವ ಈ ಅರಣ್ಯ ಜಾಗವನ್ನು ಸುಮಾರು 68 ಮಂದಿ ಒತ್ತುವರಿ ಮಾಡಿಕೊಂಡಿರುವದಾಗಿ ಅರಣ್ಯ ಇಲಾಖೆಯ ದಾಖಲೆಗಳೇ ಹೇಳುತ್ತಿವೆ. ಒತ್ತುವರಿಯಾಗಿರುವ ಜಾಗದಲ್ಲಿ ಮನೆಗಳನ್ನು ನಿರ್ಮಿಸ ಲಾಗಿದ್ದರೂ, ಅರಣ್ಯ ಇಲಾಖೆ ಈ ಪ್ರಕರಣವನ್ನು ಕಂಡೂ ಕಾಣದಂತೆ ಮೌನಕ್ಕೆ ಶರಣಾಗಿದೆ ಎಂದು ರವಿಚಂಗಪ್ಪ ಆರೋಪಿಸಿದರು.

ಇದೀಗ ಸಂಘಟನೆ ವತಿಯಿಂದ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದ್ದು, ದೂರಿ ನಲ್ಲಿ ಅರಣ್ಯ ಜಾಗವನ್ನು ಅತಿಕ್ರಮಿಸಿ ಕಳೆದ ಹಲವು ದಶಕಗಳಿಂದ ವಾಸಿ ಸುತ್ತಿರುವ ಎಲ್ಲಾ 68 ಕುಟುಂಬಗಳನ್ನು ಒಕ್ಕಲೆಬ್ಬಿಸುವಂತೆ ಕೋರಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ಹೊಸಬೀಡು ಶಶಿ, ಹಾಗೂ ದಿವಾಕರ ಉಪಸ್ಥಿತರಿದ್ದರು.