ಮಡಿಕೇರಿ, ಏ. 24 : ಕರ್ನಾಟಕ ರತ್ನ, ಪದ್ಮಭೂಷಣ ಹಾಗೂ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕøತ ಡಾ.ರಾಜ್ ಕುಮಾರ್ ಅವರು ಮೇರುನಟ, ದೇವತಾ ಮನುಷ್ಯ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೆಳ್ಯಪ್ಪ ಬಣ್ಣಿಸಿದರು.
ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಡಾ. ರಾಜ್‍ಕುಮಾರ್ ಅವರ 90ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಾ.ರಾಜ್ ಕುಮಾರ್ ಅವರ ಮನೋಜ್ಞ ಅಭಿನಯದಿಂದ ಇಡೀ ರಾಜ್ಯದಲ್ಲಿ ತಮ್ಮದೇ ಆದ ಛಾಪನ್ನು ಹೊಂದಿದ್ದರು. ರಾಜ್ ಅವರ ಹಾಡುಗಳು ಪ್ರತಿಯೊಬ್ಬರ ಮನಸ್ಸಿನ ಬೇಗುದಿಯನ್ನು ಕಡಿಮೆ ಮಾಡುತ್ತವೆ. ಅಂತಹ ಗಾನಗಂಧರ್ವ, ನಟ ಸಾರ್ವಭೌಮರನ್ನು ಸ್ಮರಿಸುತ್ತಿರುವದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ.ರಾಜ್‍ಕುಮಾರ್ ಅವರ ಸಿನಿಮಾಗಳು ಸಾಮಾಜಿಕ ಕಳಕಳಿ ಹೊಂದಿದ್ದವು. ಕಾಯಕವೇ ಕೈಲಾಸ ಎಂಬಂತೆ, ಕೈಕಟ್ಟಿ ಕುಳಿತರೆ ಸಾಲದು, ದುಡಿಯಬೇಕು. ಹಾಗಾದಾಗ ಮಾತ್ರ ಬದುಕಿನ ಬಂಡಿ ಸಾಗಲು ಸಾಧ್ಯ ಎಂಬ ಸಂದೇಶವನ್ನು ಬಂಗಾರದ ಮನುಷ್ಯ ಚಿತ್ರದ ಮೂಲಕ ಸಾರಿದರು ಎಂದು ಹೇಳಿದರು.
‘ಡಾ.ರಾಜ್‍ಕುಮಾರ್ ಅವರು ಕನ್ನಡ ಭಾಷೆ, ನಾಡು-ನುಡಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ. ಗೋಕಾಕ್ ಚಳುವಳಿ ಮೂಲಕ ಕನ್ನಡಿಗರನ್ನು ಜಾಗೃತಗೊಳಿಸಿದರು ಎಂದು ಸ್ಮರಿಸಿದರು.’
ನಿವೃತ್ತ ಉಪನ್ಯಾಸಕ ಶಂಕರಯ್ಯ ಅವರು ಡಾ.ರಾಜ್ ಕುಮಾರ್ ಅವರು ಹಾಡಿರುವ ಹಾಡುಗಳನ್ನು ಹಾಡಿದರು. ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಜಿ. ಪಂ. ಕಾರ್ಯಪಾಲಕ ಇಂಜಿನಿಯರ್ ರಾಜ್‍ಕುಮಾರ್ ರೆಡ್ಡಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯದೇವಯ್ಯ ಇತರರು ಇದ್ದರು. ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿದರು, ಮಂಜುನಾಥ್ ವಂದಿಸಿದರು.
ಭಗೀರಥ ಜಯಂತ್ಯುತ್ಸವ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶ್ರೀ ಭಗೀರಥ ಜಯಂತಿಯನ್ನು ಆಚರಿಸಲಾಯಿತು.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿ.ಪಂ.ಸಿ.ಇ.ಒ. ಪ್ರಶಾಂತ್ ಕುಮಾರ್ ಮಿಶ್ರ, ಡಿವೈಎಸ್‍ಪಿ ಸುಂದರರಾಜ್ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಭಗೀರಥ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೆಳ್ಯಪ್ಪ ಅವರು ಮಾತನಾಡಿ, ಸತತ ಪ್ರಯತ್ನ ಪಟ್ಟಾಗ ಯಾವದೇ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ಆ ನಿಟ್ಟಿನಲ್ಲಿ ಭಗೀರಥ ಪ್ರಯತ್ನ ಅಗತ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.