ಮಡಿಕೇರಿ, ಏ. 24: ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕಿಳಿದಿರುವ ಕೆ.ಪಿ. ಚಂದ್ರಕಲಾ ಅವರಿಗೆ ಈ ಬಾರಿ ಪ್ರಚಾರಕ್ಕೆ ತಾರಾ ಮೆರುಗು ಲಭಿಸಿದೆ. ಚಂದ್ರಕಲಾ ಸಹೋದರ ಹಾಗೂ ಚಲನಚಿತ್ರ ನಟ ಜೈ ಜಗದೀಶ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ಇಂದು ಎಲ್ಲರ ಗಮನ ಸೆಳೆದರು. ಅಲ್ಲದೆ ಚಂದ್ರಕಲಾ ಸಹೋದರಿಯರಾದ ಭಾನುಮತಿ, ರತ್ನಾ, ಶೈಲಾ ಸೇರಿದಂತೆ ಮಗಳು ಸಿರಿಗೌರಿ, ಅಳಿಯ ರಕ್ಷಿತ್ ಸಹಿತ ಬಂಧು ವರ್ಗದವರು ಕಾಂಗ್ರೆಸ್ ಅಭ್ಯರ್ಥಿಗೆ ಉಮೇದುವಾರಿಕೆ ಸಲ್ಲಿಸಲು ಸಾಥ್ ನೀಡಿದರು.
ಜೈ ಜಗದೀಶ್ ವಿಶ್ವಾಸ : ಪ್ರಸಕ್ತ ಕೊನೆಯ ಘಳಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಮಾಡಿ, ಕಲಾ ಅವರಿಗೆ ಟಿಕೆಟ್ ಖಾತರಿ ಪಡಿಸಿದರಲ್ಲದೆ, ಆಕೆಯನ್ನು ಗೆಲ್ಲಿಸಿಕೊಂಡು ಬರುವಂತೆ ಸೂಚಿಸಿದ್ದು, ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ವರಿಷ್ಠರ ಆಶಯದಂತೆ, ಕಾರ್ಯಕರ್ತರು ಮತ್ತು ಜಿಲ್ಲೆಯ ಪ್ರಮುಖರು ಮತದಾರರ ಆಶೀರ್ವಾದದಿಂದ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೈ ಜಗದೀಶ್ ‘ಶಕ್ತಿ’ಯೊಂದಿಗೆ ಮುಕ್ತ ನುಡಿಯಾಡುತ್ತಾ, ಮೂರು ದಶಕಗಳಿಂದ ಎಲ್ಲಾ ಪಕ್ಷಗಳ ಒಡನಾಟವಿರುವ ತಾನು, ಈ ಹಿಂದೆ ಅಪ್ಪಚ್ಚುರಂಜನ್ ಪರ ಪ್ರಚಾರ ನಡೆಸಿದ್ದು, ಈ ಬಾರಿ ಸಹೋದರಿಗೆ ಓರ್ವ ಅಣ್ಣನಾಗಿ ತನ್ನ ಕಾಣಿಕೆ ನೀಡಬಯಸುವೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ರಾಜ್ಯ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಅಲೆಯಿದ್ದು, ಕಾರ್ಯಕರ್ತರು ಸಮರ್ಪಕವಾಗಿ ಮತದಾರರ ಬಳಿ ಸರಕಾರದ ಸಾಧನೆ ತಲಪಿಸುವದ ರೊಂದಿಗೆ, ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಕರೆ ನೀಡಿದ ಅವರು, ತಾನು ಪತ್ನಿ ಸಮೇತ ಪಕ್ಷದ ಪರ ತಾರಾ ಬಳಗವನ್ನು ಕರೆಸಿಕೊಂಡು ಈ ಬಾರಿಯ ಗೆಲುವಿಗೆ ಶ್ರಮಿಸುವೆ ಎಂದರು.
ಅತ್ಯಂತ ಕಡಿಮೆ ಸಮಯದಲ್ಲಿ ಮತದಾರರನ್ನು ಕಾಂಗ್ರೆಸ್ ತಲಪಬೇಕಿದ್ದು, ಈ ದಿಸೆಯಲ್ಲಿ ಎಲ್ಲರೂ ಒಗ್ಗೂಡಿ ಶ್ರಮಿಸುವ ಮೂಲಕ ಪಕ್ಷದ ಗೆಲುವಿಗೆ ಪಣತೊಡಬೇಕೆಂದು ನಟ ಜೈಜಗದೀಶ್ ಸಲಹೆ ಮಾಡಿದರು. ಇಂದಿನಿಂದ ಚುನಾವಣೆ ಮುಗಿಯುವ ತನಕ ಎಲ್ಲರೊಡಗೂಡಿ ಕ್ಷೇತ್ರದಲ್ಲಿದ್ದು, ತಾನು ಪ್ರಚಾರದಲ್ಲಿ ತೊಡಗಿಸಿಕೊಳ್ಳುವದಾಗಿಯೂ ಮುಕ್ತ ನುಡಿಯಾಡಿದರು.
-ಶ್ರೀಸುತ