ಮಡಿಕೇರಿ, ಏ. 24: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ, ಹಾಲಿ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಅವರು ಇಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ, ಇಲ್ಲಿನ ಜಿಲ್ಲಾ ಆಡಳಿತ ಭವನದ ಚುನಾವಣಾಧಿಕಾರಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಆ ಮುನ್ನ ನಗರದ ಮಹದೇವಪೇಟೆ ಶ್ರೀ ಚೌಡೇಶ್ವರಿ ದೇವಾಲಯ, ಮಾರುಕಟ್ಟೆ ಬಳಿ ಜಾಮಿಯಾ ಮಸೀದಿ, ಅನಂತರ ಶ್ರೀ ಕೋಟೆ ಮಹಾಗಣಪತಿ ದೇವಾಲಯ, ಸಂತ ಮೈಕಲರ ಚರ್ಚ್‍ಗೆ ತೆರಳಿ ಅಲ್ಲಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.ನಗರದ ಕೋಟೆ ಆವರಣದಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಹಿತ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಗಾಂಧಿ ಮೈದಾನ ತನಕ ತೆರಳಿದ ಅವರು, ಬಳಿಕ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ, ವಕೀಲ ನಾಗೇಂದ್ರ ಬಾಬು, ತಮ್ಮ ಸೋದರ ಹಾಗೂ ಸಿನಿಮಾ ನಟ ಜೈ ಜಗದೀಶ್ ಸಹಿತ ಪಕ್ಷದ ಪ್ರಮುಖರೊಡಗೂಡಿ ಚುನಾವಣಾಧಿಕಾರಿ ರಮೇಶ್ ಕೆ. ಕೋನಾರೆಡ್ಡಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸುವ ಮುನ್ನ ಅಪಾರ ಬೆಂಬಲಿಗರೊಂದಿಗೆ ಚಂದ್ರಕಲಾ ಅವರಿಗೆ ಮಾಜಿ ಲೋಕಸಭಾ ಸದಸ್ಯ
ಸಿ.ಹೆಚ್. ವಿಜಯ ಶಂಕರ್, ಕಾಂಗ್ರೆಸ್ ಮುಖಂಡರಾದ
(ಮೊದಲ ಪುಟದಿಂದ) ಟಿ.ಪಿ. ರಮೇಶ್, ಚಂದ್ರಮೌಳಿ, ವಿರೂಪಾಕ್ಷಪ್ಪ, ಪಿ.ಸಿ. ಹಸೈನಾರ್, ಅಪ್ರು ರವೀಂದ್ರ, ಅಬ್ದುಲ್ ರಜಾಕ್ ಸೇರಿದಂತೆ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸಹಿತ ಚುನಾಯಿತ ಕಾಂಗ್ರೆಸ್ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮೆರವಣಿಗೆಯಲ್ಲಿ ಸಾಥ್ ನೀಡಿದರು.
ಗೆಲುವಿನ ಆಶಯ: ಕಾರ್ಯಕರ್ತ ಬೆಂಬಲಿಗರಿಂದ ಜೈಕಾರದ ಘೋಷಣೆಗಳೊಂದಿಗೆ ನಾಮಪತ್ರ ಸಲ್ಲಿಸಿದ ಚಂದ್ರಕಲಾ, ಮೂರು ದಶಕಗಳಿಂದ ಕಾಂಗ್ರೆಸ್ ಏಳಿಗೆಗೆ ಶ್ರಮಿಸುತ್ತಾ, ಸತತ ಮೂರು ಬಾರಿ ಕೊಡಗು ಜಿ.ಪಂ. ಸದಸ್ಯಳಾಗಿ ಜನಪರ ಸೇವೆ ಸಲ್ಲಿಸಿರುವ ತನಗೆ, ಈ ಬಾರಿ ಮತದಾರರು ಆಶೀರ್ವದಿಸುವ ಮೂಲಕ ಗೆಲುವು ತಂದುಕೊಡಲಿ ದ್ದಾರೆ ಎಂದು ಹರ್ಷಚಿತ್ತರಾಗಿ ನುಡಿದರು.
‘ಶಕ್ತಿ’ ಬೆಳೆಸಿದೆ: 1987ರಲ್ಲಿ ಪ್ರಥಮ ಬಾರಿಗೆ ಜನತೆಯ ಆಶೀರ್ವಾದದಿಂದ ಜಿಲ್ಲಾ ಪರಿಷತ್ ಸದಸ್ಯಳಾಗಿ ಗೆಲುವಿನೊಂದಿಗೆ ರಾಜಕೀಯ ಜೀವನ ಆರಂಭಿಸಿದ ತನ್ನನ್ನು ವಿಶೇಷವಾಗಿ ‘ಶಕ್ತಿ’ ಹಾಗೂ ಸಂಸ್ಥೆಯ ಸಹೋದರರು ಈ ಮಟ್ಟಕ್ಕೆ ಬೆಳೆಸಿದ್ದು, ಈ ಸಂದರ್ಭ ಎಲ್ಲಾ ಮಾಧ್ಯಮಗಳ ಸಹಕಾರವನ್ನು ಸ್ಮರಿಸಿಕೊಳ್ಳುವದಾಗಿ ನುಡಿದರು.
ಕೈಲಾದ ಸೇವೆ ಸಲ್ಲಿಸಿರುವೆ : ರಾಜಕೀಯ ಹಾದಿಯಲ್ಲಿ ತಮ್ಮ ಪಕ್ಷದ ಸರಕಾರದ ಅವಧಿಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕೊಡಗಿನ ಕುಲದೇವಿ ಕಾವೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನೀರಾವರಿ ನಿಗಮ ಮುಖಾಂತರ ರೂ. 12 ಕೋಟಿಯಲ್ಲಿ ಕೆಲಸ ಮಾಡಿಸಿದ್ದು, ಅವಿಸ್ಮರಣೀಯ ಎಂದು ಸ್ಮರಿಸಿದರು. ಆ ಮುಖಾಂತರ ತಲಕಾವೇರಿ - ಭಾಗಮಂಡಲ ಕ್ಷೇತ್ರ ಯಾತ್ರಾರ್ಥಿಗಳು ಮೂಲಭೂತ ಸೌಕರ್ಯ ಪಡೆಯು ವಂತಾಗಿದೆ ಎಂದು ಮಾರ್ನುಡಿದರು.
ಬಸ್ ನಿಲ್ದಾಣ : ಮಡಿಕೇರಿಯ ಖಾಸಗಿ ಬಸ್ ನಿಲ್ದಾಣಕ್ಕೆ ತಾನು ನೀರಾವರಿ ಅಧ್ಯಕ್ಷೆಯಾಗಿದ್ದ ಸಂದರ್ಭ ಜಾಗ ಮಂಜೂರಾತಿಗೆ ಶ್ರಮಿಸಿದ್ದು, ಸಂಬಂಧ ಪಟ್ಟ ಇಲಾಖೆ ಹಾಗೂ ಸರಕಾರದಿಂದ ನಿವೇಶನ ಕಲ್ಪಿಸಲು ಪ್ರಯತ್ನಿಸಿದ್ದನ್ನು ಚಂದ್ರಕಲಾ ಸ್ಮರಿಸಿಕೊಂಡರು. ಅದೇ ರೀತಿ ಕುಶಾಲನಗರ ಬಸ್ ನಿಲ್ದಾಣ, ಆಟೋ ನಿಲ್ದಾಣ, ಹೆಬ್ಬಾಲೆ ಬಸ್ ನಿಲ್ದಾಣಗಳಿಗೆ ವಿಶೇಷ ಕೊಡುಗೆ ನೀಡಿರುವೆ ಎಂದು ಮೆಲುಕು ಹಾಕಿದರು.
12 ಹಳ್ಳಿಗಳಿಗೆ ನೀರು : ಕಾವೇರಿ ನದಿಯಿಂದ ಕುಶಾಲನಗರ ಸುತ್ತಮುತ್ತಲಿನ 12 ಹಳ್ಳಿಗಳಿಗೆ ಕುಡಿಯುವ ನೀರು, ಕುಶಾಲನಗರ ಹಾಗೂ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಹಾರಂಗಿಯಿಂದ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಕುಶಾಲನಗರಕ್ಕೆ ಉಪ ಖಜಾನೆ, ಉಪ ತಹಶೀಲ್ದಾರ್ ಕಚೇರಿ ಸಹಿತ ನ್ಯಾಯಾಲಯ ಸ್ಥಾಪಿಸುವಲ್ಲಿ ಶ್ರಮಿಸಿರುವೆ ಎಂದು ಬೊಟ್ಟು ಮಾಡಿದರು.
ಅಭಿವೃದ್ಧಿಯೇ ಶ್ರೀರಕ್ಷೆ : ಜಿ.ಪಂ. ಸದಸ್ಯೆಯಾದ ಮಾತ್ರದಿಂದ ಮೇಲಿನ ಅಭಿವೃದ್ಧಿಯೊಂದಿಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಸ್ಥಾಪನೆ, ರುದ್ರಭೂಮಿಗೆ ಚಿತಾಗಾರ, ಕ್ರೀಡಾಂಗಣಕ್ಕೆ ಗ್ಯಾಲರಿ ವ್ಯವಸ್ಥೆ, ಸುಂಟಿಕೊಪ್ಪ ಸುತ್ತಮುತ್ತ ರೂ. 1.30 ಕೋಟಿಯ ಗ್ರಾಮೀಣ ರಸ್ತೆಯಂತಹ ಕೆಲಸ ಮಾಡಿಸಿರುವದು ತನಗೆ ಈ ಚುನಾವಣೆಯಲ್ಲಿ ಶ್ರೀರಕ್ಷೆ ಎಂದ ಚಂದ್ರಕಲಾ, ಜಿಲ್ಲೆಯ ಓರ್ವ ಮಹಿಳೆಯಾಗಿ ಜನಪರ ಕಾಳಜಿಯೊಂದಿಗೆ ಸ್ಪರ್ಧಿಸಿರುವ ತನ್ನನ್ನು ಕ್ಷೇತ್ರದ ಜನತೆ ಆಶೀರ್ವದಿಸುವ ವಿಶ್ವಾಸವಿರಿಸಿರುವೆ ಎಂದರು.
ಬಯಸದೆ ಬಂದ ಭಾಗ್ಯ: ತಾನು ಚುನಾವಣೆಯಲ್ಲಿ ಅಭ್ಯರ್ಥಿಗಳ ನಡುವಿನ ಪೈಪೋಟಿ ಕಂಡು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾಗ ಬಯಸದೆ ಬಂದ ಭಾಗ್ಯದಂತೆ ವರಿಷ್ಠರು ಕರೆದು ಟಿಕೆಟ್‍ನೊಂದಿಗೆ ಬಿ ಫಾರಂ ನೀಡಿರುವದು ನಿಷ್ಠಾವಂತ ಕಾರ್ಯಕರ್ತರಿಗೆ ದಕ್ಕಿದ ಗೌರವವೆಂದು ಭಾವಿಸಿರುವದಾಗಿ ‘ಶಕ್ತಿ’ಯೊಂದಿಗೆ ನುಡಿದರು.