ಕುಶಾಲನಗರ, ಏ. 24: ಕುಶಾಲನಗರ ಕೊಪ್ಪ ಸೇತುವೆ ಬಳಿ ಕಾವೇರಿ ನದಿಗೆ ದಿನನಿತ್ಯ ಧಾರ್ಮಿಕ ತ್ಯಾಜ್ಯಗಳನ್ನು ಎಸೆದು ನದಿ ನೀರನ್ನು ಕಲುಷಿತಗೊಳ್ಳುವ ಕಾರಣ ತ್ಯಾಜ್ಯ ತೆರವುಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಸಂಘಟನೆಗಳ ಪ್ರಮುಖರು ‘ವಾರದ ಸ್ವಚ್ಛತೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಕುಶಾಲನಗರ-ಕೊಪ್ಪ ಸೇರಿದಂತೆ ಈ ಮೂಲಕ ಹಾದುಹೋಗುವ ವಾಹನಗಳ ಚಾಲಕರು, ಮಾಲೀಕರು ಸೇತುವೆ ಮೇಲಿಂದ ಧಾರ್ಮಿಕ ತ್ಯಾಜ್ಯಗಳನ್ನು ನದಿಗೆ ಎಸೆಯುವ ಹವ್ಯಾಸ ರೂಢಿಸಿಕೊಂಡಿದ್ದು ಈ ಮೂಲಕ ನದಿ ನೀರು ಕಲುಷಿತಗೊಳ್ಳಲು ಕಾರಣವಾಗುತ್ತಿದೆ.

ಇತ್ತೀಚೆಗಷ್ಟೆ ಯುವ ಬ್ರಿಗೇಡ್ ಕಾರ್ಯಕರ್ತರು ಟನ್‍ಗಟ್ಟಲೆ ಕಲುಷಿತ ತ್ಯಾಜ್ಯ ತೆರವುಗೊಳಿಸಿ ನದಿ ಸ್ವಚ್ಛತೆಯಲ್ಲಿ ಯಶಸ್ವಿಯಾಗಿದ್ದರು. ಕೆಲವರು ಕಣ್ತಪ್ಪಿಸಿ ನದಿಗೆ ತ್ಯಾಜ್ಯ ಎಸೆದ ಹಿನ್ನೆಲೆ ಮತ್ತೆ ತ್ಯಾಜ್ಯಗಳು ಸಂಗ್ರಹಗೊಂಡು ನೀರು ಕಲುಷಿತಗೊಳ್ಳುತ್ತಿರುವದು ಕಂಡುಬಂದಿದೆ.

ಈ ಹಿನ್ನೆಲೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು, ಸ್ಥಳೀಯ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಪ್ರತಿ ವಾರ ನದಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ಹರಿಸಿದ್ದಾರೆ. ಈ ನಿಟ್ಟಿನಲ್ಲಿ ಭಾನುವಾರ ಬೆಳಿಗ್ಗೆ 6.30 ರಿಂದ 1 ಗಂಟೆ ಕಾಲ ನದಿಯ ಸ್ವಚ್ಛತೆ ಕಾರ್ಯ ನಡೆಯಿತು.

ಇದೇ ಸಂದರ್ಭ ನದಿಗೆ ಪೂಜಾ ಸಾಮಗ್ರಿಗಳನ್ನು ಹಾಕುವ ಜನರಿಗೆ ಅರಿವು ಮತ್ತು ಜಾಗೃತಿ ಮೂಡಿಸಲಾಯಿತು. ಸ್ಥಳೀಯ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ಟಿ.ಜಿ. ಪ್ರೇಮ್‍ಕುಮಾರ್, ಡಿ.ಆರ್. ಸೋಮಶೇಖರ್, ಕಮಲಾ ಗಣಪತಿ, ಕೆ.ಆರ್. ಶಿವಾನಂದನ್, ವಿನೋದ್, ಅಕ್ಷಯ್ ಕುಮಾರ್ ಮತ್ತಿತರರು ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಕುಶಾಲನಗರ ಅರಣ್ಯ ಚೆಕ್ ಪೋಸ್ಟ್ ಬಳಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಸಿಬ್ಬಂದಿಗಳು ಕೂಡ ನದಿಗೆ ಕಸ ಹಾಕುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡುವ ಮೂಲಕ ನದಿ ಸಂರಕ್ಷಣೆಯಲ್ಲಿ ಕೈಜೋಡಿಸಿದರು.