ಸೋಮವಾರಪೇಟೆ, ಏ. 25: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಾನ್ವೆಂಟ್ ಬಾಣೆ ಗ್ರಾಮದಲ್ಲಿ ವಾಟರ್‍ಮೆನ್ ಆಗಿ ಕೆಲಸ ಮಾಡುತ್ತಿದ್ದ ಕೃಷ್ಣ ಅವರ ಕುಟುಂಬಕ್ಕೆ ಗ್ರಾಮಸ್ಥರು ಧನ ಸಹಾಯ ನೀಡಿದರು.

ಕಳೆದ ಏಳೆಂಟು ವರ್ಷ ಗಳಿಂದ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಕೃಷ್ಣ ಅವರು ಅಕಾಲಿಕವಾಗಿ ಮೃತರಾಗಿದ್ದು, ಅವರ ಕುಟುಂಬದ ಸಂಕಷ್ಟವನ್ನು ಮನಗಂಡ ಗ್ರಾಮಸ್ಥರು ಸಂಗ್ರಹಿಸಿದ ರೂ. 28,500ನ್ನು, ಕೃಷ್ಣ ಅವರ ಪತ್ನಿ ಅಕ್ಷತಾ ಅವರಿಗೆ ಮುನೇಶ್ವರ ದೇವಾಲಯದ ಆವರಣದಲ್ಲಿ ಹಸ್ತಾಂತರಿಸಲಾಯಿತು.

ಗ್ರಾಮದಲ್ಲಿ ನೀರು ಗಂಟಿಯಾಗಿದ್ದ ಕೃಷ್ಣ ಅವರು ಗ್ರಾಮಸ್ಥರಿಗೆ ಎಂತಹ ಸಂದರ್ಭದಲ್ಲೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರ ಅಕಾಲಿಕ ನಿಧನ ದಿಂದ ಕುಟುಂಬಕ್ಕೂ ಸಮಸ್ಯೆ ಯಾಗಿದ್ದು, ಇದನ್ನು ಮನ ಗಂಡು ಗ್ರಾಮಸ್ಥರೇ ಸ್ವಯಂ ಪ್ರೇರಣೆಯಿಂದ ಧನ ಸಹಾಯ ನೀಡಿದ್ದಾರೆ ಎಂದು ಶ್ರೀಮುನೇಶ್ವರ ಮತ್ತು ಚೌಡೇಶ್ವರಿ ಯುವಕ ಮಂಡಳಿ ಅಧ್ಯಕ್ಷ ಸಿ.ಎ. ವಿಶ್ವನಾಥ್ ತಿಳಿಸಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಬಸವರಾಜು, ಖಜಾಂಚಿ ಪರಮೇಶ್, ಕಾರ್ಯದರ್ಶಿ ಲತೀಶ್, ಕೊರಗಪ್ಪ, ಹರೀಶ್, ಲಿಂಗಪ್ಪ, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ವನಜ, ಜಿಲ್ಲಾ ಮಹಿಳಾ ಮಾರ್ಗದರ್ಶಿ ಅಶ್ವಿನಿ ಕೃಷ್ಣಕಾಂತ್ ಅವರುಗಳು ಉಪಸ್ಥಿತರಿದ್ದರು.