ಮಡಿಕೇರಿ, ಏ. 25: ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮುಂದಿನ 10 ದಿನಗಳ ಒಳಗೆ ಕನಿಷ್ಟ ನಾಲ್ಕು ಮಂದಿ ವೈದ್ಯರನ್ನು ನೇಮಿಸದಿದ್ದಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥರಾದ ಬಿ.ಸಿ. ಕಿರಣ್, ಕೆ.ಯು.ಶಾನಿದ್ ಹಾಗೂ ಪಿ.ಹೆಚ್. ಮರೂಫ್ ಅವರುಗಳು, ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೃಹತ್ ಕಟ್ಟಡವಿದ್ದರೂ, ಇಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯಿದೆ. ಪ್ರತಿನಿತ್ಯ ಸುತ್ತಮುತ್ತಲ ಗ್ರಾಮಗಳಿಂದ 200-300 ರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಿದ್ದು, ಇರುವ ಏಕೈಕ ವೈದ್ಯರು ಅಷ್ಟೊಂದು ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಬೇಕಿದೆ. ಇದರಿಂದಾಗಿ ವೈದ್ಯರ ಮೇಲೆ ಒತ್ತಡ ಹೆಚ್ಚಿದ್ದು, ಇರುವ ವೈದ್ಯರೂ ಸಮರ್ಪಕವಾಗಿ ರೋಗಿಗಳನ್ನು ಪರೀಕ್ಷಿಸಲಾಗದ ಪರಿಸ್ಥಿತಿ ಇದೆ ಎಂದು ಹೇಳಿದರು.ಇತ್ತೀಚೆಗೆ ಆಸ್ಪತ್ರೆಗೆ ಬಂದಿರುವ ವೈದ್ಯರು ರೋಗಿಗಳ ಮುಖವನ್ನೂ ನೋಡದೆ, ರೋಗಿಗಳನ್ನು ಪರೀಕ್ಷಿಸದೆಯೇ ಔಷಧಿ ಚೀಟಿ ಬರೆದುಕೊಡುತ್ತಿದ್ದು, ಇದರಿಂದಾಗಿ ವೈದ್ಯರ ಬಗ್ಗೆ ಸಾರ್ವಜನಿಕರು ಇಟ್ಟಿರುವ ಭರವಸೆಯೇ ಹುಸಿ ಯಾಗುವ ಸ್ಥಿತಿ ನಿರ್ಮಾಣವಾಗಿದೆ. ರೋಗಿಗಳನ್ನು ಪರೀಕ್ಷಿಸದೆಯೇ ಔಷಧಿ ನೀಡುವ ಈ ವೈದ್ಯರಿಂದ ರೋಗಿಗಳ ಮೇಲೆ ಪ್ರತಿಕೂಲ ಪರಿಣಾಮ ಗಳಾಗುವ ಸಾಧ್ಯತೆಯೂ ಹೆಚ್ಚಿದ್ದು, ಇಂತಹ ಒಂದೆರಡು ಪ್ರಕರಣಗಳು ಈಗಾಗಲೇ ನಡೆದಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರು ನೀಡಲಾಗಿದ್ದರೂ, ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ನಾಪೋಕ್ಲು ಹೋಬಳಿ ಕೇಂದ್ರ ವಾಗಿರುವದರಿಂದ ಸುತ್ತಮುತ್ತಲ ಹತ್ತಾರು ಗ್ರಾಮಗಳ ಸಾರ್ವಜನಿಕರು ತಮ್ಮ ಖಾಯಿಲೆಗಳಿಗೆ ಈ ಸಮುದಾಯ ಆರೋಗ್ಯ ಕೇಂದ್ರವನ್ನೇ ಅವಲಂಭಿಸಿದ್ದಾರೆ. ಈ ಕೇಂದ್ರಕ್ಕೆ 7 ವೈದ್ಯರ ಮಂಜೂರಾತಿ ಇದ್ದರೂ, ಈಗ ಕೇವಲ ಒಬ್ಬರು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಕರ್ತವ್ಯವೂ ಅಸರ್ಮಕವಾಗಿದ್ದು, ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಈ ಕೇಂದ್ರದಲ್ಲಿ ವೈದ್ಯರು ಲಭ್ಯರಿರುವದಿಲ್ಲ ಎಂದು ದೂರಿದ ಅವರು, ಮುಂದಿನ 10 ದಿನಗಳ ಒಳಗಾಗಿ ಆರೋಗ್ಯ ಕೇಂದ್ರಕ್ಕೆ ಒಬ್ಬರು ಮಹಿಳಾ ಶುಶ್ರೂಷಕಿ ಹಾಗೂ ಕನಿಷ್ಟ ನಾಲ್ಕು ಮಂದಿ ವೈದ್ಯರನ್ನು ನೇಮಕ ಮಾಡಬೇಕು ಹಾಗೂ ಇಲ್ಲಿರುವ ವೈದ್ಯರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ತಪ್ಪಿದಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.