ವೀರಾಜಪೇಟೆ, ಏ. 25: ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಅನೇಕ ಬಾರಿ ಗೆಲುವು ಸಾಧಿಸಿದರೂ ಕಾಲ ಹರಣ ಮಾಡಿ ಸಾರ್ವಜನಿಕ ಸೇವೆಗೆ ಸ್ಪಂದಿಸದೆ ನಿರ್ಲಕ್ಷ್ಯ ತಾಳಿದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷದತ್ತ ಒಲವು ತೋರಿದ್ದಾರೆ. ಕ್ಷೇತ್ರದ ವಿವಿಧ ಸ್ಥಳಗಳಿಗೆ ಪಕ್ಷದ ಕಾರ್ಯಕರ್ತರು ಪ್ರಚಾರಕ್ಕೆ ತೆರಳಿದಾಗಲೂ ಪಕ್ಷದ ಕುರಿತು ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕಾರ್ಯಕರ್ತರು ಪಕ್ಷದ ಸಾಧನೆ ಪಕ್ಷ ಮುಂದೆ ಕೈಗೊಳ್ಳುವ ಜನಪರ ಯೋಜನೆಗಳನ್ನು ಮತದಾರರಿಗೆ ಅರಿವು ಮೂಡಿಸಿ ಅವರ ಭಾವನೆಗಳನ್ನು ಮತವಾಗಿ ಪರಿವರ್ತಿಸಬೇಕೆಂದು ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಈ ಕ್ಷೇತ್ರದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.ಇಲ್ಲಿನ ಪಂಜರ್‍ಪೇಟೆಯ ಸೆರಿನಿಟಿ ಹಾಲ್‍ನ ಬಳಿಯ ಕಟ್ಟಡದಲ್ಲಿ ಚುನಾವಣಾ ಪ್ರಚಾರ ಕಚೇರಿಯ ಉದ್ಘಾಟನೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸಂಕೇತ್ ಪೂವಯ್ಯ ಅವರು ಕೊಡಗಿನಲ್ಲಿ ರೈತರ ಆತ್ಮಹತ್ಯೆ, ಕಾಡಾನೆ, ಹುಲಿ ಧಾಳಿಯಿಂದ ಅನೇಕರು ಹತ್ಯೆಗೊಳಗಾಗಿದ್ದರೂ ಸಂಸದ ಪ್ರತಾಪ್ ಸಿಂಹ ಒಮ್ಮೆಯೂ ಕೊಡಗಿಗೆ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ. ಕೊಡಗಿಗೆ ಸಂಸದ ಸೇರಿದಂತೆ ಜನಪ್ರತಿನಿಧಿಗಳು ಇಲ್ಲದಂತಾಗಿದ್ದಾರೆ. ರೈತರು, ಬೆಳೆಗಾರರು ಸಂಕಷ್ಟದಲ್ಲಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರ ಅವರ ಬೇಡಿಕೆಗೆ, ನೋವಿಗೆ ಸ್ಪಂದಿಸಿಲ್ಲ. ಕೇಂದ್ರ ಸರಕಾರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದ ಇಂದು ಜನತೆ ಕಂಗಾಲಾಗಿದ್ದಾರೆ ಜೊತೆಗೆ ಸಂಕಷ್ಟಕ್ಕು ಸಿಲುಕಿದ್ದಾರೆ ಎಂದು ಟೀಕಿಸಿದರು.

ಪಕ್ಷದ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್. ಮತೀನ್ ಮಾತನಾಡಿ, ಪಕ್ಷದ ಎರಡನೇ ಹಂತದ ಚುನಾವಣಾ ಪ್ರಚಾರವನ್ನು ಆರಂಭಿಸಲಾಗಿದೆ. ಕಾರ್ಯಕರ್ತರಿಗೆ ಹೋದ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿರುವದರಿಂದ ಹಾಗೂ ಪಕ್ಷದ ವರಿಷ್ಠರಿಗೆ ಅಂತರಜಾಲ ತಾಣದಲ್ಲಿ ಪಕ್ಷದ ಫಲಿತಾಂಶ ಸಕಾರಾತ್ಮಕವಾಗಿ ಬರಲಿರುವದರಿಂದ ಪಕ್ಷದ ಸಾಧನೆಗಳನ್ನು ಮತದಾರರಿಗೆ ತಲಪಿಸಲು ಚುರುಕುಗೊಳಿಸುವಂತೆ ಹೇಳಿದರು.

ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಹಿಳಾ ಘಟಕದ ಜಿಲ್ಲಾ ಸಮಿತಿಯ ಅಜ್ಜಮಾಡ ಮುತ್ತಮ್ಮ, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಸಮಿತಿಯ ಐಸಾಕ್ ಮಾತನಾಡಿದರು. ವೇದಿಕೆಯಲ್ಲಿ ಸಿ.ಎ. ನಾಸರ್, ಸುಮಿತ್ರ, ಪಂದಿಯಂಡ ರವಿ ಮಾದಪ್ಪ, ಭಾಗ್ಯ. ಅಮ್ಮಂಡ ವಿವೇಕ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಭೆಯಲ್ಲಿ ಗಾಂಧಿನಗರದ ಹತ್ತು ಮಂದಿ ಮಹಿಳೆಯರು ಪಕ್ಷಕ್ಕೆ ಸೇರ್ಪಡೆಗೊಂಡರು.

ಸಭೆಗೆ ಮೊದಲು ಕಾಡಾನೆ ಧಾಳಿಯಿಂದ ಲಕ್ಷಾಂತರ ರೂಪಾಯಿ ನಷ್ಟಕ್ಕೊಳಗಾದ ಸಂತ್ರಸ್ತ ಮಹಿಳೆ ಅಜ್ಜಮಾಡ ಪೊನ್ನಮ್ಮ ರಿಬ್ಬನ್ ಕತ್ತರಿಸಿ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿದರು.