ಕುಶಾಲನಗರ, ಏ. 25: ಶ್ರೀ ಶಿರಡಿ ಸಾಯಿಬಾಬಾ ವಿಗ್ರಹ ಕುಶಾಲನಗರ ಪುರಪ್ರವೇಶ ಸಂದರ್ಭ ಭಕ್ತಾದಿಗಳು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಕುಶಾಲನಗರ ಸಾಯಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಶಿರಡಿ ಕ್ಷೇತ್ರದಿಂದ ಬುಧವಾರ ಮುಂಜಾನೆ ಆಗಮಿಸಿದ ವಿಗ್ರಹವನ್ನು ಕೊಪ್ಪ ಕಾವೇರಿ ಸೇತುವೆ ಬಳಿಯಿಂದ ಕಾವೇರಿ ಮಾತೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ತರಲಾಯಿತು.
ಕುಶಾಲನಗರದ ಶ್ರೀ ಗಣಪತಿ ದೇವಾಲಯದಲ್ಲಿ ಹಾಗೂ ಗ್ರಾಮದೇವತೆ ಬೈಚನಹಳ್ಳಿ ಮಾರಿಯಮ್ಮ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ರಥಬೀದಿಯಲ್ಲಿರುವ ವಿವಿಧ ದೇವಾಲಯಗಳಲ್ಲಿ ವಿಗ್ರಹಕ್ಕೆ ಪೂಜೆ ನೆರವೇರಿಸಲಾಯಿತು. ನಂತರ ಸಾಯಿ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.
ಬೆಂಗಳೂರಿನ ಅರ್ಚಕ ರಾಮಲಿಂಗರಾವ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ಜರುಗಿದವು. ಶ್ರೀ ಶಿರಡಿ ಸಾಯಿ ಟ್ರಸ್ಟ್ನ ಅಧ್ಯಕ್ಷÀ ಧರೇಶ್ ಬಾಬು, ಟ್ರಸ್ಟಿಗಳಾದ ಎಸ್.ಎಲ್. ಶ್ರೀಪತಿ, ಮುನಿಸ್ವಾಮಿ, ನಂಜುಂಡಸ್ವಾಮಿ, ಓಬಳ ರೆಡ್ಡಿ, ದೇವಾಲಯ ಒಕ್ಕೂಟದ ಅಧ್ಯಕ್ಷರಾದ ಎಂ.ಕೆ. ದಿನೇಶ್, ಕೆ.ಆರ್. ಶಿವಾನಂದನ್ ಮತ್ತು ಪ್ರತಿನಿಧಿಗಳು, ಭಕ್ತಾದಿಗಳು ಇದ್ದರು.