ಸೋಮವಾರಪೇಟೆ, ಏ. 25: ತಮ್ಮ ದುಡಿಮೆಯ ಹಣದಿಂದ ಸಾರ್ವಜನಿಕರಿಗೆ ಉಪಯೋಗವಾಗುವ ಕೆರೆಗಳನ್ನು ಹೂಳೆತ್ತುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವ ಹರಪಳ್ಳಿ ರವೀಂದ್ರ ಅವರಿಗೆ ಸಾರ್ವಜನಿಕವಾಗಿ ‘ಆಧುನಿಕ ಭಗೀರಥ’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಮೀಪದ ಹಾನಗಲ್ಲು ಬಾಣೆ ಗ್ರಾಮದ ಶ್ರೀ ಚೌಡೇಶ್ವರಿ ಸೇವಾ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ವಿವಿಧ ಸಂಘಸಂಸ್ಥೆಗಳ ಮುಖಂಡರು, ಗಣ್ಯರ ಉಪಸ್ಥಿತಿಯಲ್ಲಿ ‘ಆಧುನಿಕ ಭಗೀರಥ’ ಎಂಬ ಬಿರುದನ್ನು ಹರಪಳ್ಳಿ ರವೀಂದ್ರ ಅವರಿಗೆ ನೀಡಿ ಅಭಿನಂದಿಸಲಾಯಿತು.

ಮೂಲತಃ ಹರಪಳ್ಳಿ ಗ್ರಾಮದ ರವೀಂದ್ರ ಅವರು ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದರೂ ಗ್ರಾಮದಲ್ಲಿ ಅಪ್ಪಟ ಕೃಷಿಕರಾಗಿದ್ದಾರೆ. ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ವಿತರಿಸುವ ಮೂಲಕ ಗಮನ ಸೆಳೆದಿದ್ದು, ಪ್ರತಿ ವರ್ಷ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಿಕೊಂಡು ಬರುತ್ತಿದ್ದಾರೆ.

ಇಷ್ಟೇ ಅಲ್ಲದೇ ಹಾನಗಲ್ಲು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಯಡೂರು ದೇವರ ಕೆರೆ ಮತ್ತು ಸೋಮವಾರಪೇಟೆ ಪಟ್ಟಣದ ಆನೆಕೆರೆಯನ್ನು 15 ಲಕ್ಷಕ್ಕೂ ಅಧಿಕ ರೂಪಾಯಿ ವೆಚ್ಚ ಮಾಡಿ ಹೂಳೆತ್ತಿಸಿದ್ದು, ಕೆರೆಗಳನ್ನು ನೀರಿನ ಸೆಲೆ ಮೂಡಿದೆ. ಈ ಹಿನ್ನೆಲೆ ರವೀಂದ್ರ ಅವರಿಗೆ ಆಧುನಿಕ ಭಗೀರಥ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ್ ತಿಳಿಸಿದರು.

ಪ್ರಶಸ್ತಿ ಸ್ವೀಕರಿಸಿದ ರವೀಂದ್ರ ಅವರು ಮಾತನಾಡಿ, ದುಡಿದಿದ್ದರಲ್ಲಿ ಸ್ವಲ್ಪವನ್ನಾದರೂ ಕಷ್ಟದಲ್ಲಿರುವವರಿಗೆ ನೀಡುವ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವೆಂಕಟೇಶ್, ತಾಲೂಕು ಪಂಚಾಯಿತಿ ಸದಸ್ಯೆ ಎಚ್.ಎನ್. ತಂಗಮ್ಮ, ಮೋಟಾರ್ ಯೂನಿಯನ್ ಅಧ್ಯಕ್ಷ ಸಿ.ಸಿ. ನಂದ, ಆಟೋ ಚಾಲಕರ ಸಂಘದ ಅಧ್ಯಕ್ಷ ಮೋಹನ್, ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ಎಸ್.ಎ. ಮುರುಳೀಧರ್, ನಗಪ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್, ಚೌಡೇಶ್ವರಿ ಮಹಿಳಾ ಘಟಕದ ಅಧ್ಯಕ್ಷೆ ಸರಸ್ವತಿ, ನಗರ ಗೌಡ ಒಕ್ಕೂಟದ ಪದಾಧಿಕಾರಿ ಹಾಲಪ್ಪ, ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು, ಬೇಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂತೋಷ್ ರೈ, ಕಾರ್ಮಿಕ ಘಟಕದ ಉಪಾಧ್ಯಕ್ಷ ಬಬಿನ್ ರೈ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.