ಮಡಿಕೇರಿ, ಏ. 25: ತಮ್ಮ ಮನೆಯ ಬೀರುವಿನಲ್ಲಿ ಇರಿಸಿದ್ದ ಅಂದಾಜು ರೂ. 10 ಲಕ್ಷ ಮೌಲ್ಯದ 248 ಗ್ರಾಂ ಚಿನ್ನಾಭರಣ ದೋಚಿರುವ ಕಳ್ಳನೊಬ್ಬನಿಗೆ ಗೋಣಿಕೊಪ್ಪಲು ಠಾಣಾ ಪೊಲೀಸ್ ಅಧಿಕಾರಿಗಳು ರಕ್ಷಣೆ ನೀಡಿರುವ ಆರೋಪ ಕುರಿತು ಇಂದು ನೊಂದ ಮಹಿಳೆಯೊಬ್ಬರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ.ಕಳೆದ ಆಗಸ್ಟ್ನಲ್ಲಿ ಮನೆ ಕೆಲಸ ಮಾಡಿಸುವ ಸಂದರ್ಭ ನಿವೃತ್ತ ಶಿಕ್ಷಕಿಯಾಗಿರುವ ಮಹಿಳೆಯ ವಿದ್ಯಾರ್ಥಿಯೇ ಕೆಲಸ ಮಾಡುತ್ತಿದ್ದು, ಈತ ಶಿಕ್ಷಕಿಯ ಕಣ್ತಪ್ಪಿಸಿ ಬೀರುವಿನಿಂದ ಚಿನ್ನಾಭರಣ ದೋಚಿರುವದಾಗಿ ಹೇಳಲಾಗುತ್ತಿದೆ. ಘಟನೆ ನಡೆದು ಒಂದು ವಾರದ ಬಳಿಕ ಆಭರಣ ದೋಚಿರುವದು ಅರಿವಿಗೆ ಬಂದ ಮೇರೆಗೆ ನಿವೃತ್ತ ಶಿಕ್ಷಕಿ ಕಮಲ ಎಂಬವರು ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಮ್ಮ ಪುತ್ರ ಹಾಗೂ ಪುತ್ರಿ ಬೆಂಗಳೂರಿನಲ್ಲಿ ನೆಲೆಸಿರುವ ಕಾರಣ ಒಂಟಿಯಾಗಿ ವಾಸವಿರುವ ನಿವೃತ್ತ ಶಿಕ್ಷಕಿ ದೂರು ನೀಡಿದ್ದರೂ ಆ ಬಗ್ಗೆ ಗಂಭೀರವಾಗಿ ಪರಿಗಣಿಸದೆ ಅಂದಿನ ಪೊಲೀಸ್
(ಮೊದಲ ಪುಟದಿಂದ) ಠಾಣಾಧಿಕಾರಿ ಪ್ರಕರಣದ ಕುರಿತು ಕಾಳಜಿ ತೋರಲಿಲ್ಲವೆನ್ನಲಾಗಿದೆ. ಈ ಬಗ್ಗೆ ನೊಂದ ಶಿಕ್ಷಕಿ ತನ್ನ ಮಗನ ಬಳಿ ಅಳಲು ತೋಡಿಕೊಂಡಿದ್ದು, ಮಗನ ಸ್ನೇಹಿತರೊಬ್ಬರು ಬೇರೆಡೆ ಪೊಲೀಸ್ ಅಧಿಕಾರಿಯಾಗಿದ್ದು, ಅವರ ಮುಖಾಂತರ ಗೋಣಿಕೊಪ್ಪಲು ಠಾಣೆಗೆ ಕರೆ ಮಾಡಿಸಲಾಗಿ ಅಂದಿನ ಠಾಣಾಧಿಕಾರಿ ರಾಜು ಎಂಬವರು ಅಕ್ಟೋಬರ್ 22 ರಂದು ಪ್ರಕರಣ (ಎಫ್ಐಆರ್) ನಮೂದಿಸಿಕೊಂಡರೆನ್ನಲಾಗಿದೆ.
ಈ ಸಂದರ್ಭ ಶಿಕ್ಷಕಿ ಸುಳಿವು ನೀಡಿರುವ ಆರೋಪಿಯನ್ನು ಕೂಡ ಠಾಣೆಗೆ ಕರೆಸಿಕೊಂಡಿರುವ ಪೊಲೀಸರು ರೂ. 10 ಲಕ್ಷ ಮೌಲ್ಯದ ಬದಲಿಗೆ ರೂ. 4 ಲಕ್ಷದ ಚಿನ್ನಾಭರಣವೆಂದು ಅರ್ಜಿಯಲ್ಲಿ ನಮೂದಿಸುವಂತೆ ಕಮಲ ಅವರ ಮೇಲೆ ಒತ್ತಡ ಹೇರಿ ಬರೆಸಿದ್ದಾಗಿ ಗೊತ್ತಾಗಿದೆ. ಬಳಿಕ ಆಭರಣ ಕೊಡಿಸುವದಾಗಿ ಭರವಸೆ ನೀಡಿದ್ದು, ಕಳೆದ ಎಂಟು ತಿಂಗಳಿನಿಂದ ಯಾವದೇ ಕ್ರಮ ಜರುಗಿಸದೆ ಅನ್ಯಾಯ ಮಾಡಿದ್ದಾಗಿ ಇದೀಗ ನೊಂದಾಕೆ ಮೇಲಧಿಕಾರಿಗಳಿಗೆ ಪುಕಾರು ನೀಡಿದ್ದಾರೆ.
ಅಲ್ಲದೆ ಆರೋಪಿಯೊಂದಿಗೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳು ಶಾಮಿಲಾಗಿ ರೂ. 10 ಲಕ್ಷ ಮೌಲ್ಯದ ಆಭರಣಗಳನ್ನು ತನಗೆ ವಂಚಿಸಲು ಯತ್ನಿಸುತ್ತಿರುವ ಶಂಕೆ ಶಿಕ್ಷಕಿಯದ್ದಾಗಿದೆ. ಗೋಣಿಕೊಪ್ಪಲು ಇಗ್ಗುತಪ್ಪ ಸಂಘದ ಸದಸ್ಯರೂ ಆಗಿರುವ ಈಕೆಗೆ ಸೂಕ್ತ ನ್ಯಾಯ ಕೊಡಿಸುವಂತೆ ಸಂಘದ ಅಧ್ಯಕ್ಷೆ ಬೇಬಿ ಬೋಜಮ್ಮ ಕೂಡ ಮೇಲಧಿಕಾರಿಗಳ ಗಮನ ಸೆಳೆದಿದ್ದಾರೆ.