ಮಡಿಕೇರಿ, ಏ. 25: 2003ರಲ್ಲಿ ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಮೂರು ತಾಲೂಕುಗಳು ಕೂಡ ಒಂದೊಂದು ವಿಧಾನಸಭಾ ಕ್ಷೇತ್ರವಾಗಿತ್ತು. ಈ ಚುನಾವಣೆಯಲ್ಲಿ ಮಡಿಕೇರಿ ತಾಲೂಕಿನಿಂದ ಕೆ.ಜಿ. ಬೋಪಯ್ಯ, ವೀರಾಜಪೇಟೆ ತಾಲೂಕಿನಿಂದ ಹೆಚ್.ಡಿ. ಬಸವರಾಜು ಅವರುಗಳು ಬಿಜೆಪಿಯಿಂದ ಚುನಾಯಿತರಾಗಿದ್ದರೆ, ಸೋಮವಾರಪೇಟೆ ತಾಲೂಕಿನಿಂದ ಕಾಂಗ್ರೆಸ್ ಪಕ್ಷದಿಂದ ಬಿ.ಎ. ಜೀವಿಜಯ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಈ ಚುನಾವಣೆ ಯಲ್ಲಿ ಬಿಜೆಪಿಯ ಅಪ್ಪಚ್ಚುರಂಜನ್ ಅವರು ಪರಾಭವಗೊಂಡಿದ್ದು, ಜಿಲ್ಲೆಯ ರಾಜಕೀಯ ಇತಿಹಾಸ.ನಂತರದ ಚುನಾವಣೆ ಎದುರಾಗಿದ್ದು, 2008ರಲ್ಲಿ. ಈ ಸಂದರ್ಭ ಕ್ಷೇತ್ರ ಪುನರ್ ವಿಂಗಡಣೆ (ಡಿ. ಲಿಮಿಟೇಷನ್) ಭೂತ ಕಾಡಿತ್ತು. ಈ ವೇಳೆ ಕೊಡಗಿನ ಮೂರು ವಿಧಾನಸಭಾ ಕ್ಷೇತ್ರಗಳು ಎರಡು ಕ್ಷೇತ್ರಕ್ಕೆ ಪರಿವರ್ತನೆಗೊಂಡಿದ್ದವು. ಸೋಮವಾರಪೇಟೆ ಕ್ಷೇತ್ರ ತನ್ನ ಅಸ್ತಿತ್ವ ಕಳೆದುಕೊಂಡರೆ, ಈ ತಾಲೂಕು ಹಾಗೂ ಮಡಿಕೇರಿ ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳು ಒಳಗೊಂಡಂತೆ ಮಡಿಕೇರಿ ಕ್ಷೇತ್ರ ಹಾಗೂ ಮಡಿಕೇರಿ ತಾಲೂಕಿನ ಹಲವು ಗ್ರಾಮ ಮತ್ತು ಸಂಪೂರ್ಣವಾಗಿ ವೀರಾಜಪೇಟೆ ತಾಲೂಕನ್ನು ಒಳಗೊಂಡಂತೆ ವೀರಾಜಪೇಟೆ ಕ್ಷೇತ್ರವಾಗಿ ಎರಡು ಕ್ಷೇತ್ರಕ್ಕೆ ಸೀಮಿತಗೊಂಡವು.

ಜಿಲ್ಲೆಯ ಜನರು ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಕೊಡಗು ಬಂದ್ ಕೂಡ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದರೂ, ಕುಲ್‍ದೀಪ್ ಸಿಂಗ್ ನೇತೃತ್ವದ ಆಯೋಗ ಪ್ರಕಟಿಸಿದ್ದ ತೀರ್ಮಾನವೇ ಅಂತಿಮವಾಗಿ ಜಿಲ್ಲೆ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಜನಸಂಖ್ಯೆ ಆಧಾರದಲ್ಲಿ ಸೀಮಿತಗೊಂಡವು. ಈ ಸಂದರ್ಭ ರಾಜಕೀಯವಾಗಿಯೂ ಬಹಳಷ್ಟು ಬದಲಾವಣೆಗಳಾದವು. ಇದೇ ಅವಧಿಯಲ್ಲಿ 2008ರ ಮೇ ತಿಂಗಳಿನಲ್ಲಿ ಚುನಾವಣೆಯೂ ಎದುರಾಯಿತು.

ಅದು ಮೇ 10.5.2008 ಅಂದು ಕ್ಷೇತ್ರ ಪುನರ್ ವಿಂಗಡಣೆ ಬಳಿಕದ ಪ್ರಥಮ ಚುನಾವಣೆ ನಡೆಯಿತು. ಈ ಸಂದರ್ಭ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಆ ಸಂದರ್ಭ ವಿಧಾನ ಪರಿಷತ್ ಸದಸ್ಯರಾಗಿದ್ದ ಸಿ.ಎಸ್. ಅರುಣ್ ಮಾಚಯ್ಯ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು ವೀರಾಜಪೇಟೆ ಕ್ಷೇತ್ರದಿಂದ ಸ್ಪಧೆರ್Àಗೆ ಇಳಿದಿದ್ದು, ಮಹತ್ತರವಾದ ರಾಜಕೀಯ ಬೆಳವಣಿಗೆಯಾಗಿತ್ತು.

ಈ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಒಟ್ಟು 11 ಮಂದಿ ಕಣದಲ್ಲಿದ್ದರೆ, ವೀರಾಜಪೇಟೆ ಕ್ಷೇತ್ರದಿಂದ 5 ಮಂದಿ ಸ್ಪರ್ಧಿಸಿದ್ದರು.

ಮಡಿಕೇರಿ ಕ್ಷೇತ್ರ

ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಬಿ.ಎ. ಜೀವಿಜಯ, ಬಿಜೆಪಿ ಯಿಂದ ಎಂ.ಪಿ. ಅಪ್ಪಚ್ಚುರಂಜನ್, ಜೆಡಿಎಸ್‍ನಿಂದ ಕೆ.ಎನ್. ವಸಂತ್, ಬಿಎಸ್‍ಪಿಯಿಂದ ಕೆ.ಎಚ್. ವಿಠಲ್, ಸಮಾಜವಾದಿ ಪಕ್ಷದಿಂದ ಕಾಳಚಂಡ ತಮ್ಮಯ್ಯ ಹಾಗೂ ಪಕ್ಷೇತರರುಗಳಾಗಿ ಬಿ.ಎಂ. ತಿಮ್ಮಯ್ಯ, ಐ.ಪಿ. ಭವೇರಪ್ಪ, ವಿ.ಎಂ. ಸಂತೋಷ್ ಕುಮಾರ್, ಹೆಚ್.ಬಿ. ಸಣ್ಣಪ್ಪ,

(ಮೊದಲ ಪುಟದಿಂದ) ಕೆ.ಪಿ. ಅಪ್ಪಯ್ಯ ಹಾಗೂ ಸಾಬುಜಾನ್ ಸೇರಿ ಒಟ್ಟು 11 ಮಂದಿ ಚುನಾವಣೆ ಎದುರಿಸಿದ್ದರು.

ವೀರಾಜಪೇಟೆ ಕ್ಷೇತ್ರ

ವೀರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಶಾಂತೆಯಂಡ ವೀಣಾ ಅಚಯ್ಯ, ಬಿಜೆಪಿಯಿಂದ ಕೆ.ಜಿ. ಬೋಪಯ್ಯ, ಜೆಡಿಎಸ್‍ನಿಂದ ಅರುಣ್ ಮಾಚಯ್ಯ, ಬಹುಜನ ಸಮಾಜವಾದಿ ಪಕ್ಷದಿಂದ ಕೆ.ಎಂ. ಕುಂಞ ಅಬ್ದುಲ್ಲಾ ಹಾಗೂ ಸಮಾಜವಾದಿ ಪಕ್ಷದಿಂದ ಗಿರಿ ಉತ್ತಪ್ಪ ಕಣದಲ್ಲಿದ್ದರು.

ಮಡಿಕೇರಿಯಲ್ಲಿ ರಂಜನ್‍ಗೆ ಜಯ

ಈ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಮೇ 25 ರಂದು. ಈ ಸ್ಪರ್ಧೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಅಪ್ಪಚ್ಚುರಂಜನ್ 60,084 ಮತಗಳಿಸಿ ಜಯಭೇರಿ ಬಾರಿಸಿದರೆ, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಬಿ.ಎ. ಜೀವಿಜಯ 53,499 ಮತಗಳಿಸಿ 6585 ಮತಗಳ ಅಂತರದಿಂದ ಸೋಲು ಕಂಡಿದ್ದರು. ಜೆಡಿಎಸ್‍ನ ಕೆ.ಎನ್. ವಸಂತ್ (8,536 ಮತ), ಬಿಎಸ್‍ಪಿಯ ಕೆ.ಎಚ್. ವಿಠಲ (1483) ಸಮಾಜವಾದಿಯ ರವಿ ತಮ್ಮಯ್ಯ (384) ಹಾಗೂ ಪಕ್ಷೇತರರಾದ ಕೆ.ಪಿ. ಅಪ್ಪಯ್ಯ (498), ಬಿ.ಎಂ. ತಿಮ್ಮಯ್ಯ (334), ಐ.ಪಿ. ಭವೇರಪ್ಪ (305), ಸಣ್ಣಪ್ಪ (330), ಸಾಬುಜಾನ್ (597) ಹಾಗೂ ಸಂತೋಷ್ ಕುಮಾರ್ (1632) ಮತ ಪಡೆದಿದ್ದರು.

ವೀರಾಜಪೇಟೆಯಲ್ಲಿ ಬೋಪಯ್ಯ

ವೀರಾಜಪೇಟೆ ಕ್ಷೇತ್ರದಲ್ಲಿ ವೀಣಾ ಅಚ್ಚಯ್ಯ ಹಾಗೂ ಸ್ಪರ್ಧೆಯ ಲಾಭದಿಂದ ಕೆ.ಜಿ. ಬೋಪಯ್ಯ ಅವರು ಜಯಗಳಿಸಿದ್ದರು. ವಿಜೇತ ಅಭ್ಯರ್ಥಿ ಬಿಜೆಪಿಯ ಬೋಪಯ್ಯ ಅವರಿಗೆ 48,605 ಮತ ಲಭ್ಯವಾದರೆ ಸಮೀಪದ ಪ್ರತಿಸ್ಪರ್ಧಿ ವೀಣಾ ಅಚ್ಚಯ್ಯ 33,533 ಹಾಗೂ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಅರುಣ್ ಮಾಚಯ್ಯ ಅವರಿಗೆ 29,920 ಮತ ದೊರೆತಿತ್ತು. ಬಹುಜನ ಸಮಾಜವಾದಿಯ ಕುಂಞ ಅಬ್ದುಲ್ಲಾಗೆ 1825 ಹಾಗೂ ಸಮಾಜವಾದಿಯ ಗಿರಿ ಉತ್ತಪ್ಪಗೆ 2463 ಮತ ಚಲಾವಣೆಯಾಗಿತ್ತು. ಈ ಕ್ಷೇತ್ರದಲ್ಲಿ ಕೆ.ಜಿ. ಬೋಪಯ್ಯ ಅವರ ಗೆಲುವಿನ ಅಂತರ 15,072 ಮತಗಳಷ್ಟಿತ್ತು. ಇದು ಎರಡು ವಿಧಾನ ಸಭಾ ಕ್ಷೇತ್ರವಾಗಿ ಕೊಡಗು ಪರಿವರ್ತನೆಯಾದ ಬಳಿಕದ ಪ್ರಥಮ ಚುನಾವಣೆಯ ಫಲಿತಾಂಶವಾಗಿತ್ತು ಎಂಬದನ್ನು ಇಲ್ಲಿ ಸ್ಮರಿಸಬಹುದಾಗಿದೆ.