ಮಡಿಕೇರಿ, ಏ. 25: ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವದರೊಂದಿಗೆ, ಇಂದು ಚುನಾವಣಾಧಿಕಾರಿಗಳಿಂದ ಸ್ವೀಕೃತಗೊಂಡ ಬೆನ್ನಲ್ಲೇ ಚುನಾವಣಾ ಕಾವು ರಂಗೇರತೊಡಗಿದೆ.ಇಂದು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹಾಗೂ ಬಂಡಾಯ ಕಾಂಗ್ರೆಸ್ಸಿಗರು ಅಲ್ಲಲ್ಲಿ ಬಿರುಸಿನ ಪ್ರವಾಸದೊಂದಿಗೆ ಮತದಾರರ ವೈಯಕ್ತಿಕ ಬೇಟೆಯಲ್ಲಿ ತೊಡಗಿಸಿಕೊಂಡಿದ್ದಾಗಿ ಮಾಹಿತಿ ಲಭಿಸಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಎಂ.ಪಿ. ಅಪ್ಪಚ್ಚುರಂಜನ್ ಅವರು ಇಂದು ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರ ಪಡೆಯೊಂದಿಗೆ ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿ ವಿವಿಧೆಡೆ ಅಂಗಡಿ, ಮನೆಗಳಿಗೆ ಖುದ್ದು ತೆರಳಿ ಮತಯಾಚಿಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ (ಮೊದಲ ಪುಟದಿಂದ) ಅವರು, ಎಲ್ಲೆಡೆ ಸಮಾಜದ ಎಲ್ಲಾ ವರ್ಗದ ಜನತೆ ಬಿಜೆಪಿ ಪರವಾಗಿ ಒಲವು ಹೊಂದಿದ್ದು, ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವದರೊಂದಿಗೆ ಬಿಜೆಪಿಯತ್ತ ಸ್ಪಂದನ ನೀಡುತ್ತಿರುವದಾಗಿ ವಿವರಿಸಿದರು. ಅಲ್ಪಸಂಖ್ಯಾತರಿಗೂ ಬೇಡವಾಗಿರುವ ಟಿಪ್ಪು ಜಯಂತಿ ಆಚರಣೆಯಿಂದ ಸಮಾಜದಲ್ಲಿ ಕೋಮು ದ್ವೇಷಕ್ಕೆ ಕಾರಣರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಆಕ್ರೋಶ ಬಿಜೆಪಿಗೆ ವರವಾಗಿ ಪರಿಣಮಿಸುವದಾಗಿ ಅವರು ಅನುಭವ ಹಂಚಿಕೊಂಡರು. ಅಲ್ಲದೆ, ಡಿವೈಎಸ್ಪಿ ಎಂ.ಕೆ. ಗಣಪತಿ ಸಾವಿನ ಪ್ರಕರಣದಲ್ಲಿ ಸಚಿವ ಕೆ.ಜೆ. ಜಾರ್ಜ್ ಮತ್ತಿತರರು ಪೊಲೀಸ್ ಅಧಿಕಾರಿ ಕುಟುಂಬಕ್ಕೆ ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು.ಎಸಗಿರುವ ಅನ್ಯಾಯಕ್ಕೆ ಜಿಲ್ಲೆಯ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.ಜೆಡಿಎಸ್ ಪ್ರಚಾರ : ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ಅವರು ಕೂಡ ಇಂದು ವಿವಿಧೆಡೆಗಳಲ್ಲಿ ಬಿರುಸಿನ ಪ್ರವಾಸದೊಂದಿಗೆ ಮತಬೇಟೆ ನಡೆಸಿದರು. ಸೋಮವಾರಪೇಟೆಯಿಂದ ಮಡಿಕೇರಿ ಸುತ್ತಮುತ್ತಲಿನ ವಿವಿಧೆಡೆ ಸಂಚರಿಸಿ, ಅಲ್ಲಲ್ಲಿ ಸಮಾಲೋಚನೆ ನಡೆಸಿದರು.ಇಲ್ಲಿನ ಪಕ್ಷದ ಕಚೇರಿಗೂ ಆಗಮಿಸಿ, ಸಾಕಷ್ಟು ಚುನಾವಣಾ ಕಾರ್ಯತಂತ್ರ ರೂಪಿಸುವ ದಿಸೆಯಲ್ಲಿ ಪ್ರಮುಖರೊಂದಿಗೆ ಮಾತನಾಡಿದರು.
ಚಂದ್ರಕಲಾ ಪ್ರವಾಸ : ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಕೂಡ ನಿನ್ನೆ ಸಂಜೆಯಿಂದಲೇ ಪಕ್ಷದ ಕಚೇರಿಯಲ್ಲಿ ಮಾತುಕತೆಯೊಂದಿಗೆ, ಇರುವ ಅಲ್ಪ ಅವಧಿಯಲ್ಲಿ ಮತ ಬೇಟೆಗೆ ಅನುಸರಿಸಬೇಕಾದ ರೂಪುರೇಷೆಗಳ ಕುರಿತು ಮುಖಂಡರೊಂದಿಗೆ ಅಭಿಪ್ರಾಯ ಹಂಚಿಕೊಂಡರು. ಇಂದು ಕೂಡ ಇಲ್ಲಿನ ಚುನಾವಣಾ ಕಚೇರಿಯಲ್ಲಿ ನಾಮಪತ್ರ ಪರಿಶೀಲನೆ ಬಳಿಕ ಅಲ್ಲಲ್ಲಿ ಪ್ರವಾಸ ನಡೆಸಿ ಕಾರ್ಯಕರ್ತರೊಡನೆ ಚರ್ಚಿಸಿದರು. ಕುಶಾಲನಗರ, ಸುಂಟಿಕೊಪ್ಪ ಸುತ್ತಮುತ್ತ ಮತದಾರರ ಸಂಪರ್ಕದೊಂದಿಗೆ ಪ್ರವಾಸ ಮಾಡಿದರು.
ಕೆಜಿಬಿ ಸಮಾಲೋಚನೆ : ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಕೂಡ ತಮ್ಮ ನಾಮಪತ್ರ ಪರಿಶೀಲನೆ ಬಳಿಕ, ವೀರಾಜಪೇಟೆ ಹಾಗೂ ಗೋಣಿಕೊಪ್ಪಲುವಿನಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಬಾಳೆಲೆ ಹಾಗೂ ಇತರೆಡೆಗಳಲ್ಲಿ ಬಿರುಸಿನ ಸಂಚಾರದೊಂದಿಗೆ ಚುನಾವಣಾ ತಂತ್ರಗಾರಿಕೆ ರೂಪಿಸುವತ್ತ ಸಮಾಲೋಚನೆ ನಡೆಸಿದರು. ರಾಜ್ಯ ಕಾಂಗ್ರೆಸ್ ಆಡಳಿತ ವಿರೋಧಿ ಅಲೆಯಿಂದ ಬಿಜೆಪಿ ಗೆಲುವು ಸಾಧಿಸುವ ದಿಸೆಯಲ್ಲಿ, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗೆ ಮುಂದಿನ ತಂತ್ರಗಾರಿಕೆಯ ಪ್ರಸ್ತಾವನೆ ನಡೆಸಿದ್ದಾಗಿ ಗೊತ್ತಾಗಿದೆ.
ಸಂಕೇತ್ ಪ್ರವಾಸ : ವೀರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಕೂಡ ವೀರಾಜಪೇಟೆ ಪಟ್ಟಣ ಸೇರಿದಂತೆ ಇತರೆಡೆಗಳಲ್ಲಿ ಬೆಳಗ್ಗಿನ ಜಾವದಿಂದಲೇ ಮತದಾರರ ಬೇಟೆ ನಡೆಸಿದ್ದಾಗಿ ಮಾಹಿತಿ ಲಭಿಸಿದೆ. ಸಾಕಷ್ಟು ಕಡೆ ಬೇರೆ ಬೇರೆ ಮುಖಂಡರನ್ನು ಖುದ್ದಾಗಿ ಬೇಟೆಯಾಗಿರುವ ಅವರು, ಕಳತ್ಮಾಡು ಹಾಗೂ ಇತರೆಡೆಗಳಲ್ಲಿ ಜೆಡಿಎಸ್ ಕಾರ್ಯಕರ್ತರೊಡನೆ ಚುನಾವಣಾ ಪೂರ್ವ ತಯಾರಿ ನಡೆಸಿದ್ದಾಗಿ ತಿಳಿದು ಬಂದಿದೆ.
ಗೋಣಿಕೊಪ್ಪಲು: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ವಿಚಾರವಾಗಿ ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಕ್ಷೇತ್ರದ ಅಭ್ಯರ್ಥಿಯಾದ ಮೇರಿಯಂಡ ಸಂಕೇತ್ ಪೂವಯ್ಯ ಅವರಿಂದ ಮಾಹಿತಿ ಪಡೆದರು. ಮೈಸೂರಿನ ಖಾಸಗಿ ರೆಸಾರ್ಟ್ಗೆ ಬರಮಾಡಿಕೊಂಡು ಸಂಕೇತ್ ಅವರಲ್ಲಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್ ಮತೀನ್, ರಾಜ್ಯ ಮುಖಂಡ ಜಿ.ಟಿ. ದೇವೇಗೌಡ ಉಪಸ್ಥಿತರಿದ್ದರು.
ಹಿರಿಯ ರಾಜಕೀಯ ಮುತ್ಸದ್ಧಿ ಹೈಕೋರ್ಟ್ ವಕೀಲ ಎ.ಕೆ. ಸುಬ್ಬಯ್ಯ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು.
ಅರುಣ್ ಮಾಚಯ್ಯ ಮತ ಬೇಟೆ : ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ಅರುಣ್ ಮಾಚಯ್ಯ ಅವರು, ಇಂದು ವೀರಾಜಪೇಟೆ ಪಟ್ಟಣ ಹಾಗೂ ಗೋಣಿಕೊಪ್ಪಲುವಿನ ಪಕ್ಷದ ಕಾರ್ಯಕರ್ತರೊಡಗೂಡಿ ಪ್ರತ್ಯೇಕ ಸಮಾಲೋಚನೆ ನಡೆಸಿದರು. ಅಲ್ಲಲ್ಲಿ ಚುನಾವಣೆ ಸಂಬಂಧ ಬಿರುಸಿನ ಚಟುವಟಿಕೆ ನಡೆಸಿದ ಅವರು, ದಕ್ಷಿಣ ಕೊಡಗಿನ ಹುದಿಕೇರಿ ಮುಂತಾದೆಡೆ ಹಲವು ಪ್ರಮುಖರನ್ನು ಖುದ್ದು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು.
ಇನ್ನು ನಾಪಂಡ ಮುತ್ತಪ್ಪ, ಹರೀಶ್ ಬೋಪಣ್ಣ, ಪದ್ಮಿನಿ ಪೊನ್ನಪ್ಪ ಸಹಿತ ಇತರರು ಕೂಡ ತಮ್ಮ ತಮ್ಮ ಆಪ್ತರೊಂದಿಗೆ ಚುನಾವಣೆ ಸಂಬಂಧ ಮಾತುಕತೆ ನಡೆಸಿದ್ದಾಗಿ ತಿಳಿದು ಬಂದಿದೆ.