ಮಡಿಕೇರಿ, ಏ. 25: ದೇವರ ಉತ್ಸವದಂತಹ ಧಾರ್ಮಿಕ ಕಾರ್ಯಗಳು, ಮದುವೆ ಮತ್ತಿತರ ಶುಭ ಕಾರ್ಯಗಳು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಕ್ರೀಡಾ ಹಬ್ಬಗಳಿಗೆ ಇದು ಪರ್ವಕಾಲ. ಇವುಗಳೊಂದಿಗೆ ಈ ಬಾರಿ ಎದುರಾಗಿರುವದು ರಾಜ್ಯ ವಿಧಾನಸಭೆಯ ಚುನಾವಣೆಯ ಬಿಸಿ. ಈ ಎಲ್ಲಾ ವಿಚಾರಗಳಲ್ಲಿಯೂ ಸಂಬಂಧಿತ ಎಲ್ಲರೂ ತೊಡಗಿಸಿಕೊಂಡಿದ್ದು ತಮ್ಮದೇ ಆದ ಬಿರುಸಿನ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.ರಾಜಕೀಯಕ್ಕೆ ಸಂಬಂಧಿಸಿದಂತೆ ಇದೀಗ ತಾನೆ ಸ್ಪರ್ಧಾ ವೇದಿಕೆ ಸಜ್ಜುಗೊಳ್ಳುತ್ತಿದೆ. ಈ ನಡುವೆ ಜಿಲ್ಲೆಯ ವಿವಿಧ ವಿಭಾಗಗಳಲ್ಲಿ ಆಗಿಂದಾಗ್ಗೆ ವಾಯು-ವರುಣನ ಅಬ್ಬರ ಜನತೆಯನ್ನು ಆತಂಕಕ್ಕೆ ತಳ್ಳುತ್ತಿದೆ. ಇದರೊಂದಿಗೆ ಗುಡುಗು-ಮಿಂಚಿನ ಅಬ್ಬರ ಬೇರೆ.ಬೇಸಿಗೆ ಸಂದರ್ಭದಲ್ಲಿ ಅಡ್ಡ ಮಳೆಯಾಗುವದು ಈ ರೀತಿ ವಾತಾವರಣದಲ್ಲಿ ಏರು-ಪೇರು ಉಂಟಾಗು ವದು ಸಹಜವಾದರೂ,(ಮೊದಲ ಪುಟದಿಂದ) ನಷ್ಟ ಸಂಭವಿಸುತ್ತಿರುವದು ದುಗುಡಕ್ಕೆ ಕಾರಣವಾಗುತ್ತಿದೆ. ಗಾಳಿ-ಮಳೆಯ ಆರ್ಭಟದಿಂದಾಗಿ ಒಂದೆರೆಡು ಕಡೆಗಳಲ್ಲಿ ವಾರದ ಸಂತೆಗಳೂ ಕೊಚ್ಚಿ ಹೋಗಿರುವ ಘಟನೆಗಳು ನಡೆದಿವೆ. ಇನ್ನು ಹಲವೆಡೆ ಮನೆಗಳ ಮೇಲೆ ಮರ ಉರುಳಿ ಬಿದ್ದಿರುವದು... ವಿದ್ಯುತ್ ಕಂಬಗಳು ಜಖಂಗೊಂಡು ಹಾನಿಯಾಗಿರುವದು, ಆಸ್ತಿ-ಪಾಸ್ತಿಗಳಿಗೆ ಜಖಂ ಉಂಟಾಗುತ್ತಿರುವದು ಮಳೆಗಾಲಕ್ಕೆ ಮುಂಚಿತವಾಗಿಯೇ ಎಚ್ಚರಿಕೆಯ ಕರೆಗಂಟೆಯಾಗಿ ಪರಿಣಮಿಸುತ್ತಿದೆ.

ಇನ್ನು ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಯು.ಜಿ.ಡಿ. ಕಾಮಗಾರಿಯ ಪರಿಣಾಮದಿಂದಾಗಿ ಬಿರು ಮಳೆಯಾದರೆ ರಸ್ತೆಗಳೆಲ್ಲವೂ ಕೆಸರಿನಿಂದ ಆವೃತ್ತವಾಗಿ ಜನರ ಹಾಗೂ ವಾಹನಗಳ ಓಡಾಟಕ್ಕೆ ತೊಡಕಾಗಿ ಪರಿಣಮಿಸುತ್ತಿದೆ. ಹಲವು ಕ್ರೀಡಾಕೂಟಗಳ ಸಂಭ್ರಮಕ್ಕೂ ನಡು-ನಡುವೆ ವಾತಾವರಣ ತಣ್ಣೀರು ಎರೆಚುತ್ತಿರುವದು ಕಳೆದ ಕೆಲವು ದಿನಗಳಿಂದ ಕಂಡುಬರುತ್ತಿರುವ ವಿದ್ಯಮಾನವಾಗಿದೆ.

*ಸಿದ್ದಾಪುರ: ಇಲ್ಲಿಗೆ ಸಮೀಪದ ನೆಲ್ಯಹುದಿಕೇರಿ, ಅರೆಕಾಡು, ಅಭ್ಯತ್‍ಮಂಗಲ ವ್ಯಾಪ್ತಿಯಲ್ಲಿ ಮಧ್ಯಾಹ್ನ ವೇಳೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಗಾಳಿಮಳೆಗೆ ಮರಗಳು ಧರೆಗುರುಳಿವೆ. ರಸ್ತೆಗೆ ಮರ ಬಿದ್ದುದರಿಂದ ಮರಗೋಡು-ಸಿದ್ದಾಪುರ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮರಗಳೊಂದಿಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಎಲ್ಲೆಡೆ ಕತ್ತಲಾವರಿಸಿದೆ. ಒಟ್ಟು 1.80 ಇಂಚು ಮಳೆಯಾಗಿದೆ.