ಮಡಿಕೇರಿ, ಏ. 25: ನಾಲ್ಕೈದು ದಿನಗಳ ಹಿಂದೆ ನಗರದಲ್ಲಿ ಯಾವದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಮುಂಗಾಲು ಬಳಿ ತೀವ್ರ ಗಾಯ ಗೊಂಡಿರುವ ಕರುವೊಂದಕ್ಕೆ ಇಲ್ಲಿನ ಗೌಳಿಬೀದಿಯ ಮೈದಾನದಲ್ಲಿ ಆಸರೆಕಲ್ಪಿಸಲಾಗಿದೆ.ಅಂದಾಜು ಒಂದು ವರ್ಷದ ಗಂಡು ಕರು ತೀವ್ರ ಗಾಯಗೊಂಡಿದ್ದನ್ನು ಗಮನಿಸಿರುವ ಚಿಕ್ಕಪೇಟೆಯ ಬೇಕರಿಯೊಂದರ ನೌಕರ ಸುದೀಪ್ ಹಾಗೂ ಪ್ರಭಾಕರ್ ಎಂಬವರು ಪಶು ವೈದ್ಯರ ಮುಖಾಂತರ ಚಿಕಿತ್ಸೆ ಕೊಡಿಸಿದ್ದಾರೆ. ಕಂಚಿಕಾಮಾಕ್ಷಿ ದೇವಾಲಯ ಬಳಿ ಮೈದಾನದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಈ ಕರುವಿನ ರಕ್ಷಣೆಗೆ ಕಾಳಜಿ ವಹಿಸಿದ್ದಾರೆ.ತೀವ್ರ ಗಾಯಗೊಂಡು ಘಾಸಿಗೊಂಡ ಭಾಗ ಹುಳುವಾಗಿ ಕರು ಜೀವನ್ಮರಣ ಸ್ಥಿತಿಯಿಂದ, ಇದೀಗ ಸುಧಾರಿಸಿಕೊಂಡಿದ್ದು, ಈ ಮುದ್ದು ಕರುವಿನ ತಾಯಿ ಹಸು ಕೂಡ ಹುಡುಕಿಕೊಂಡು ಬಂದು ಇದೀಗ ತನ್ನ ಕಂದನೊಂದಿಗೆ ಆ ಶೆಡ್‍ನಲ್ಲಿ ತಂಗತೊಡಗಿದೆ. ಯುವಕರು ಕರುವಿಗೆ ಮೈದಾನದಲ್ಲೇ ಕಟ್ಟಿ ಹಾಕಿ ನೀರು ಇತ್ಯಾದಿ ಉಣಿಸುತ್ತಿದ್ದು, ಹಸು ಹಗಲು ಮೇಯಲು ತೆರಳಿ, ಮರಳಿ ಬಂದು ತನ್ನ ಕಂದನೊಂದಿಗೆ ರಾತ್ರಿ ಜತೆಗಿರಲಿದೆ. ಈ ಕರುವಿಗಾಗಿ ಮಿಡಿದಿರುವ ಯುವಕರ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.