ಸೋಮವಾರಪೇಟೆ, ಏ. 25: ಶಾಂತಿಯುತ ಚುನಾವಣೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಸಿಆರ್ಪಿಎಫ್ ಸಿಬ್ಬಂದಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು.
ಶಸ್ತ್ರಸಜ್ಜಿತ ತುಕಡಿಯ 30 ಸಿಬ್ಬಂದಿಗಳೊಂದಿಗೆ ಡಿವೈಎಸ್ಪಿ ಶ್ರೀನಿವಾಸಮೂರ್ತಿ, ವೃತ್ತನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಣ್ಣ ಪಥಸಂಚಲದಲ್ಲಿ ಭಾಗವಹಿಸಿದ್ದರು. ಮಾದಾಪುರ, ಐಗೂರು, ಬಜೆಗುಂಡಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಯಿತು.
ಶನಿವಾರಸಂತೆ: ಪಟ್ಟಣದಲ್ಲಿ ಬುಧವಾರ ಕೇಂದ್ರೀಯ ಭದ್ರತಾ ಮೀಸಲು ಪಡೆಯ 60 ಮಂದಿ ಕಮಾಂಡರ್ ಸುನೀಲ್ ಕುಮಾರ್ ನೇತೃತ್ವದಲ್ಲಿ ಪಥ ಸಂಚಲನ ನಡೆಸಿದರು.
ಜನತೆ ಚುನಾವಣೆಯಲ್ಲಿ ನಿರ್ಭೀತಿಯಿಂದ ಮತ ಚಲಾಯಿಸಲು, ಆಸೆ- ಆಮಿಷಗಳಿಗೆ ಒಳಗಾಗದಿರಲು, ಬೆದರಿಕೆಗೆ ಹಿಂಜರಿಯದೆ ಮತ ಚಲಾಯಿಸುವಂತೆ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಥ ಸಂಚಲನ ನಡೆಸಲಾಯಿತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಬೈಪಾಸ್ ರಸ್ತೆ, ಕಿತ್ತೂರುರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆದ ಪಥ ಸಂಚಲನ ಜಾಥಾದಲ್ಲಿ ಜಿಲ್ಲಾ ಸಶಸ್ತ್ರ ದಳದ 2 ವಾಹನಗಳು, 3 ಪೊಲೀಸ್ ಜೀಪುಗಳೊಂದಿಗೆ ಡಿವೈಎಸ್ಪಿ ಶ್ರೀನಿವಾಸ್, ವೃತ್ತ ನಿರೀಕ್ಷಕ ನಂಜುಂಡೇಗೌಡ, ಶನಿವಾರಸಂತೆ ಠಾಣಾ ಎಸ್ಐ ಎನ್. ಆನಂದ್, ಎಎಸ್ಐ ಶಿವಣ್ಣ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಸಮೀಪದ ಕೊಡ್ಲಿಪೇಟೆಯಲ್ಲೂ ಕಡೆಪೇಟೆ ಗಣಪತಿ ದೇವಾಲಯದಿಂದ ಮುಖ್ಯರಸ್ತೆಯಲ್ಲಿ ಹ್ಯಾಂಡ್ಪೋಸ್ಟ್ವರೆಗೆ ಕೇಂದ್ರೀಯ ಭದ್ರತಾ ಮೀಸಲು ಪಡೆ ಪಥ ಸಂಚಲನ ನಡೆಸಿತು.