ಕುಶಾಲನಗರ, ಏ. 25: ಎಲ್ಲೆಡೆ ಬಿಜೆಪಿ ಪರ ಅಲೆಯಿದ್ದು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದು ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯುವದು ಖಚಿತ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಆಶಯ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರಕಾರದ ಜನಪರ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜನತೆ ರಾಜ್ಯದ ಕಾಂಗ್ರೆಸ್ ಸರಕಾರದ ದುರಾಡಳಿತದ ಬಗ್ಗೆ ರೋಸಿಹೋಗಿದ್ದಾರೆ. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಹೆಚ್ಚಿನ ಶ್ರಮವಹಿಸಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ವಿವಿಧ ಪಕ್ಷಗಳನ್ನು ತೊರೆದ ಕಾರ್ಯಕರ್ತರು ಶಾಸಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ತಾಲೂಕು ಕಾರ್ಯಾಧ್ಯಕ್ಷ ಎಂ.ಎನ್. ಕುಮಾರಪ್ಪ, ನಗರ ಘಟಕದ ಅಧ್ಯಕ್ಷ ಕೆ.ಜಿ. ಮನು, ಉಪಾಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಯುವಮೋರ್ಚಾ ತಾಲೂಕು ಕಾರ್ಯಾಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಜಿ.ಪಂ. ಸದಸ್ಯೆ ಮಂಜುಳಾ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ, ಸದಸ್ಯೆ ಲಲಿತಾ, ಪ್ರಮುಖರಾದ ಶಿವಾಜಿ ಮತ್ತಿತರರು ಇದ್ದರು.