ವೀರಾಜಪೇಟೆ, ಏ. 25: ಕಳೆದ 1956 ರಿಂದ ವೀರಾಜಪೇಟೆ ವಿಧಾನಸಭಾ ಕ್ಷೇತ್ರ 2008ರವರೆಗೆ ಮೂರು ಬಾರಿ ಪುನರ್ವಿಂಗಡಣೆಗೊಂಡುದರಿಂದ 2008ರಲ್ಲಿ ಮೂರನೇ ಬಾರಿಗೆ ಅತಿ ದೊಡ್ಡ ವಿಧಾನಸಭಾ ಸಾಮಾನ್ಯ ಕ್ಷೇತ್ರವಾಗಿ ರಚನೆಗೊಂಡಿದ್ದು ಈ ಕ್ಷೇತ್ರದಲ್ಲಿ ಕಣದಲ್ಲಿರುವ ವಿವಿಧ ರಾಜಕೀಯ ಪಕ್ಷಗಳಿಗೆ ಪ್ರಚಾರಕ್ಕೆ ಅತಿ ಪ್ರಯಾಸವಾಗಿದೆ.ವೀರರಾಜೇಂದ್ರ ರಾಜರ ಆಳ್ವಿಕೆಯ ಪಟ್ಟಣ, ರಾಜನ ಆಳ್ವಿಕೆಯ ನಂತರ ವೀರರಾಜೇಂದ್ರಪೇಟೆ ಎಂಬದಾಗಿ ನಾವiಕರಣಗೊಂಡು ನಂತರದ ವರ್ಷಗಳಲ್ಲಿ ವೀರಾಜಪೇಟೆ ಎಂಬದಾಗಿ ನಾಮಕರಣಗೊಂಡಿತ್ತು. 1956 ರಲ್ಲಿ ಕೊಡಗು ಸರಕಾರ ವಿಶಾಲ ಕರ್ನಾಟಕದೊಂದಿಗೆ ವಿಲೀನಗೊಳ್ಳುವ ಮೊದಲು ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಮಡಿಕೇರಿಯ ಬಹು ಭಾಗದವರೆಗೂ ವ್ಯಾಪಿಸಿತ್ತು. 1962 ರಲ್ಲಿ ಈ ಕ್ಷೇತ್ರ ಪುನರ್ವಿಂಗಡಣೆಗೊಂಡು ವೀರಾಜಪೇಟೆ ತಾಲೂಕಿಗೆ ಸೀಮಿತಗೊಂಡಿತು. ಜೊತೆಗೆ ಬುಡಕಟ್ಟು ಜನಾಂಗ, ಹರಿಜನ, ಗಿರಿಜನ, ಪರಿಶಿಷ್ಟ ಪಂಗಡದ ಜನರು ತಾಲೂಕಿನಲ್ಲಿ ಅಧಿಕ ವಾಗಿದ್ದುದರಿಂದ ಹಿಂದುಳಿದ ತಾಲೂಕು ಆಗಿದ್ದರಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ತಾಲೂಕನ್ನು ಪ್ರಗತಿ ಹಾಗೂ ಅಭಿವೃದ್ಧಿಯತ್ತ ಕೊಂಡೊಯ್ಯಲು ಮೀಸಲು ಕ್ಷೇತ್ರವನ್ನಾಗಿ ಪರಿವರ್ತಿಸಲಾಯಿತು.

ಮೀಸಲು ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧನೆ ಸುಮಾ ವಸಂತ್: ಸಚಿವೆ ಸ್ಥಾನದ ಅದೃಷ್ಟವಂತೆ

ಮರಾಠಿ ಮೀಸಲು ಜನಾಂಗದಿಂದ ಕಾಂಗ್ರೆಸ್ ಪಕ್ಷದಿಂದ 1985, 1989, 1999 ರಲ್ಲಿ ಸ್ಪರ್ಧಿಸಿದ ಸುಮಾ ವಸಂತ್ ಅವರು ಎರಡು ಬಾರಿ ರಾಜ್ಯ ಸಚಿವೆಂiÀi ಸ್ಥಾನ ಅಲಂಕರಿಸಿದ್ದರು. ಇದೇ ಸಮಯದಲ್ಲಿ ಎ.ಐ.ಸಿ.ಸಿ.ಯಲ್ಲಿಯೂ ಹುದ್ದೆಯನ್ನು ಪಡೆದುಕೊಂಡಿದ್ದರು. 2004ರಲ್ಲಿ ಸೋಲನ್ನು ಕಂಡ ಸುಮಾ ವಸಂತ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆ ಅಖಿಲ ಭಾರತ ಮಟ್ಟದಲ್ಲಿ ಪಕ್ಷದ ಸಕ್ರೀಯ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಂಗ್ರೆಸ್‍ಗೆ ಮತ್ತೊಂದು ಹ್ಯಾಟ್ರಿಕ್ ಗೆಲುವು ಸಾಧಿಸಿದ ಜಿ.ಕೆ. ಸುಬ್ಬಯ್ಯ

ಸುಮಾ ವಸಂತ್‍ಗೆ ಮೊದಲು ಕುಟ್ಟದ ಜಿ.ಕೆ. ಸುಬ್ಬಯ್ಯ ಅವರು 1972 ರಲ್ಲಿ, 1978 ಹಾಗೂ 1983ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ ಜಿ.ಕೆ. ಸುಬ್ಬಯ್ಯ ಅವರು ಮೂರು ಅವಧಿಯವರೆಗೂ ಪಕ್ಷದಿಂದ ಯಾವದೇ ಉನ್ನತ ಸ್ಥಾನ ಮಾನ ದೊರೆಯದೆ ಕೇವಲ ಶಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು.

ಭಾರತೀಯ ಜನತಾ ಪಾರ್ಟಿಯ ವರಿಷ್ಠರಿಗೆ ಮೀಸಲು ಕ್ಷೇತ್ರದ ಅರ್ಹ ಅಭ್ಯರ್ಥಿಗಳನ್ನು ಹುಡುಕುವದು ಕಷ್ಟಸಾಧ್ಯವೆನಿಸಿದ್ದರಿಂದ 1994ರಲ್ಲಿ ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಹೆಚ್.ಡಿ. ಬಸವರಾಜು ಅವರನ್ನು ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆ ಮಾಡಿದ್ದು ಚುನಾವಣೆಯಲ್ಲಿ ಬಸವರಾಜು ಗೆಲುವು ಸಾಧಿಸಿದ್ದರು. ಬಸವರಾಜು ಅವರು 1999 ರಲ್ಲಿ ಸೋಲನ್ನು ಕಂಡ ನಂತರ ಮತ್ತೆ 2004ರ ಚುನಾವಣೆಯಲ್ಲಿಯೂ ಸ್ಪರ್ಧಿಸಿದ ಬಸವರಾಜು ಗೆಲುವು ಸಾಧಿಸಿದರೂ ನಂತರ ಬಸವಾರಜು ಅವರಿಗೆ ಬಿಜೆಪಿ ಪಕ್ಷದಿಂದ ಈ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಲಿಲ್ಲ.

2008 ರಿಂದ ಸಾಮಾನ್ಯ ಕ್ಷೇತ್ರದಲ್ಲಿ ಕೆ.ಜಿ. ಬೋಪಯ್ಯ ಸ್ಪರ್ಧೆ ಪ್ರತಿಷ್ಠಿತ ಸ್ಪೀಕರ್ ಸ್ಥಾನವು ಒಲಿಯಿತು

ವೀರಾಜಪೇಟೆ ವಿಧಾನಸಭಾ ಕ್ಷೇತ್ರ 2008ರಲ್ಲಿ ಪುನರ್ವಿಂಗಡಣೆಗೊಂಡು ಸಾಮಾನ್ಯ ಕ್ಷೇತ್ರವಾಗಿ ರಚನೆಗೊಂಡ ನಂತರ ಬಿಜೆಪಿಯಿಂದ ಕೆ.ಜಿ. ಬೋಪಯ್ಯ ಪ್ರಥಮ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸಿ ಪ್ರತಿಷ್ಠಿತ ಸ್ಪೀಕರ್ ಹುದ್ದೆಯನ್ನು ಪಡೆದಿದ್ದರು. ನಂತರ 2013 ರಲ್ಲಿಯೂ ಸ್ಪರ್ಧಿಸಿ ಕಾಂಗ್ರೆಸ್ ವಿರುದ್ಧ ಗೆಲುವು ಸಾಧಿಸಿದರೊಂದಿಗೆ 2018ರಲ್ಲಿ ಪುನ: ಸ್ಪರ್ಧಿಸಿ ಗೆಲುವು ಸಾಧಿಸಿದರೆ ಹ್ಯಾಟ್ರಿಕ್ ಸಾಧನೆಗೆ ಮುಂದಾಗಿದ್ದಾರೆ.

1962ರಲ್ಲಿ ವಿಧಾನಸಭೆಗೆ ಕಾಂಗ್ರೆಸ್ ಪಕ್ಷದಿಂದ ಎ.ಪಿ. ಅಪ್ಪಣ್ಣ ಸ್ಪರ್ಧಿಸಿ ಗೆಲುವು ಸಾಧಿಸಿದರೆ 1967ರಲ್ಲಿ ಎನ್. ಲೋಕಯ್ಯ ನಾಯಕ್ ಬಿಜೆಎಸ್ (ಜನಸಂಘ) ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರದ 1972 ರಿಂದ 1989ರವರೆಗೆ ವೀರಾಜಪೇಟೆ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿತ್ತು. 1994ರಲ್ಲಿ ಹೆಚ್.ಡಿ. ಬಸವರಾಜ್ ಬಿಜೆಪಿಯಿಂದ ಗೆಲುವು ಸಾಧಿಸಿದ ನಂತರ 1999ರಲ್ಲಿ ಸುಮಾ ವಸಂತ್ ಅವರು ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತಂದು ಕೊಟ್ಟಿದ್ದರು. 2004ರಲ್ಲಿ ಬಿಜೆಪಿಯಿಂದ ಮತ್ತೆ ಸ್ಪರ್ಧಿಸಿದ ಬಸವರಾಜು ಅವರು ಗೆಲುವು ಸಾಧಿಸಿದ ನಂತರ ಮುಂದಿನ ಎರಡು ಅವಧಿಯಲ್ಲಿ ಬಿಜೆಪಿಯ ಕೆ.ಜಿ. ಬೋಪಯ್ಯ (2008 ಹಾಗೂ 2013ರಲ್ಲಿ) ಗೆಲುವು ಸಾಧಿಸಿ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯನ್ನು ಮುರಿದು ದಾಖಲೆ ಸ್ಥಾಪಿಸಿದರು.

1962ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 48000 ಮತದಾರರಿಂದ ಆರಂಭಗೊಂಡ ಈ ಕ್ಷೇತ್ರ 2018ರಲ್ಲಿ 2,12,746 ಮತದಾರರನ್ನು ಹೊಂದಿದೆ. ಈ ಹಿಂದೆ 36 ಗ್ರಾಮ ಪಂಚಾಯಿತಿಗಳಿದ್ದು ಪುನರ್ವಿಂಗಡಣೆಯ ನಂತರ 46 ಗ್ರಾಮ ಪಂಚಾಯಿತಿಗಳು ಸೇರಿವೆ. ಕುಟ್ಟದಿಂದ ಸಂಪಾಜೆಯವರೆಗೆ ಸುಮಾರು 140 ಕಿ.ಮೀ. ವಿಸ್ತೀರ್ಣವನ್ನು ಕ್ಷೇತ್ರ ಹೊಂದಿದೆ ಎನ್ನಲಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಏಪ್ರಿಲ್ 14ರ ತನಕದ ಮಿಂಚಿನ ಮತದಾರರ ನೋಂದಣಿ ಸೇರಿ, 1,06679 ಪುರುಷರು ಹಾಗೂ 1,06067 ಮಹಿಳೆಯರು ಸೇರಿದಂತೆ ಒಟ್ಟು 2,12,746 ಮತದಾರರ ಅಧಿಕೃತ ನೋಂದಣಿಯಾಗಿದ್ದು ಈ ವಿಧಾನ ಸಭಾ ಚುನಾವಣೆಯಲ್ಲಿ ಮತಚಲಾಯಿಸುವ ಹಕ್ಕನ್ನು ಪಡೆದಿದ್ದಾರೆ.

- ಡಿ.ಎಂ. ರಾಜ್‍ಕುಮಾರ್