ಕೂಡಿಗೆ, ಏ. 25: ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶುದ್ಧೀಕರಣ ಕೇಂದ್ರದಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿ ರುವ ಸಿಬ್ಬಂದಿಗಳಿಗೆ ವೇತನ ನೀಡದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಏಳು ಜನ ಕಾರ್ಮಿಕರಿಗೆ ಸಂಬಳ ನೀಡದ ಹಿನ್ನೆಲೆಯಲ್ಲಿ ಹಾಗೂ ನೀರು ಶುದ್ಧೀಕರಣಕ್ಕೆ ಬೇಕಾದ ಕ್ಲೋರಿನ್ ಸರಬರಾಜು ಇಲ್ಲದ ಹಿನ್ನೆಲೆಯಲ್ಲಿ 12 ಗ್ರಾಮಗಳಿಗೆ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದ್ದು, ಗ್ರಾಮಸ್ಥರು ನೀರಿಗಾಗಿ ಪರದಾಡುವ ಪ್ರಸಂಗ ಎದುರಾಗಿದೆ. ಹೆಬ್ಬಾಲೆ ಗ್ರಾಮದಲ್ಲಿ ಕಳೆದ 10 ವರ್ಷಗಳ ಹಿಂದೆ ಎಂಟು ಕೋಟಿ ರೂ ವೆಚ್ಚದಲ್ಲಿ ಕಾವೇರಿ ನದಿಯಿಂದ ನೀರನ್ನು ಸರಬರಾಜು ಮಾಡಿ, ಕೇಂದ್ರವೊಂದರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಶುದ್ಧೀಕರಣ ಕೇಂದ್ರ ಹಾಗೂ ಬೃಹತ್ ನೀರಿನ ಟ್ಯಾಂಕ್ ಅನ್ನು ನಿರ್ಮಿಸಿ 2.5 ದಶಲಕ್ಷ ಸಾಮಥ್ರ್ಯದ (ಮೊದಲ ಪುಟದಿಂದ) ನೀರನ್ನು ದಿನಂಪ್ರತಿ ಶುದ್ಧೀಕರಿಸಿ ಕೊಡಗಿನ ಗಡಿಭಾಗ ಶಿರಂಗಾಲ, ತೊರೆನೂರು ಹೆಬ್ಬಾಲೆ, ಕೂಡಿಗೆ, ಕೂಡು ಮಂಗಳೂರು ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 12 ಗ್ರಾಮಗಳಿಗೆ ನೀರು ಒದಗಿಸಲಾಗುತ್ತಿದೆ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಕಳೆದ 17 ತಿಂಗಳ ಹಿಂದೆ ಈ ಬೃಹತ್ ಕುಡಿಯುವ ನೀರಿನ ಯೋಜನೆಯ ಘಟಕವನ್ನು ಕೊಡಗು ಜಿಲ್ಲಾ ಪಂಚಾಯಿತಿಗೆ ಹಸ್ತಾಂತರ ಮಾಡಲಾಗಿದೆ. ಇದರ ಜವಬ್ದಾರಿಯನ್ನು ಜಿಲ್ಲಾ ಪಂಚಾಯಿತಿಯ ಕುಡಿಯುವ ನೀರಿನ ಯೋಜನೆಯ ಇಂಜಿನಿಯರಿಂಗ್ ವಿಭಾಗ ನಿರ್ವಹಿಸುತ್ತಿದೆ. ಆದರೆ, ಇಲ್ಲಿ ಕಾರ್ಯನಿರ್ವಹಿಸುತ್ತಿರುವ 7 ಜನ ಕಾರ್ಮಿಕರಿಗೆ ಒಂದು ವರ್ಷ ದಿಂದಲೂ ವೇತನ ನೀಡದ ಹಿನ್ನೆಲೆಯಲ್ಲಿ ಹಾಗೂ ಕಳೆದ ಮೂರು ತಿಂಗಳಿನಿಂದ ಕಾವೇರಿ ನದಿಯಲ್ಲೂ ನೀರು ಕಡಿಮೆಯಾಗಿ ಕಲ್ಮಶ ನೀರು ಶುದ್ಧೀಕರಣ ಕೇಂದ್ರಕ್ಕೆ ಬರುತ್ತಿದ್ದು, ಈ ನೀರನ್ನೇ ಯಾವದೇ ರೀತಿಯಲ್ಲಿ ಶುದ್ಧೀಕರಣ ಮಾಡದೆ ರಾಸಾಯನಿಕ ಕ್ಲೋರೀನ್ ಅನ್ನು ಬಳಸದೆ ಅಶುದ್ಧ ನೀರನ್ನು ನೇರವಾಗಿ ಕುಡಿಯಲು ಸರಬರಾಜು ಮಾಡುತ್ತಿದ್ದು, ಇದರಿಂದ ಜನರಿಗೆ ರೋಗ-ರುಜಿನಗಳು ಹೆಚ್ಚಾಗುತ್ತಿವೆ ಆದ್ದರಿಂದ ನೀರು ಶುದ್ಧೀಕರಣಕ್ಕೆ ಬೇಕಾಗುವ ಕ್ಲೋರಿನ ಕೊರತೆ ಇರುವದಿಂದ 12 ಗ್ರಾಮಗಳಿಗೆ ಸರಬರಾಜಾಗುವ ನೀರನ್ನು ಸ್ಥಗಿತಗೊಳಿಸಿದ್ದಾರೆ. ನೀರು ಸ್ಥಗಿತಗೊಂಡಿರುವದರಿಂದ ವ್ಯಾಪ್ತಿಯ ಗ್ರಾಮಸ್ಥರು ನೀರಿಲ್ಲದೆ ಪರದಾಡುತ್ತಿರುವದು ಕಂಡುಬರುತ್ತಿದೆ.
ಈ ಹಿಂದೆ ಶುದ್ಧೀಕರಣ ಘಟಕಕ್ಕೆ ಬೀಗ ಜಡಿದು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಾಲೂಕು ಪಂಚಾಯಿತಿ ಇಂಜಿನಿಯರ್ ವೀರೇಶ್ ಭೇಟಿ ನೀಡಿ ನಮ್ಮ ಬೇಡಿಕೆಯನ್ನು ಆಲಿಸಿದ್ದರು. ತದನಂತರ ಒಂದು ತಿಂಗಳ ವೇತನವನ್ನು ನೀಡಿದ್ದು, ಇನ್ನುಳಿದ ಒಂದು ವರ್ಷದ ವೇತನವನ್ನು ಮಾರ್ಚ್ ಅಂತ್ಯದೊಳಗೆ ನೀಡುವ ಭರವಸೆ ನೀಡಿದ್ದರೂ ಈವರೆಗೂ ವೇತನವನ್ನು ನೀಡಿಲ್ಲ ಎಂದು ಕಾರ್ಮಿಕರಾದ ಶ್ರೀನಿವಾಸ, ರಮೇಶ್, ಮಂಜು, ಚಂದ್ರು, ಸಂತೋಷ್, ದಿನೇಶ್, ಸೋಮೇಶ್ ತಿಳಿಸಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಕಾರ್ಮಿಕರಿಗೆ ನೀಡಬೇಕಿರುವ ವೇತನವನ್ನು ಮುಂದಿನ ದಿನಗಳಲ್ಲಿ ನೀಡಲಾಗುವದು ಹಾಗೂ ನೀರು ಶುದ್ಧೀಕರಣಕ್ಕೆ ಬೇಕಾಗುವ ಕ್ಲೋರಿನ್ ಅನ್ನು ಸರಬರಾಜು ಮಾಡಲಾಗುವದು ಎಂದು ತಿಳಿಸಿದರು.
-ಕೆ.ಕೆ.ನಾಗರಾಜಶೆಟ್ಟಿ.